
ಹಾಸನ : ಪೋಷಕರು ತಮ್ಮ ಮಕ್ಕಳನ್ನು ಬಾಲಕಾರ್ಮಿಕರಾಗಿ ದುಡಿಮೆಗೆ ಕಳುಹಿಸಬೇಡಿ ಅವರಿಗೆ ವಿದ್ಯಾಭ್ಯಾಸ ಕೊಡಿಸಿ. ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದು ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೇಮಾವತಿ ಅವರು ಹೇಳಿದರು.

ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು ಮಕ್ಕಳು ಬಾಲ್ಯದಲ್ಲಿಯೇ ಬಡತನ ಇನ್ನಿತರ ಮನೆಯ ಸಮಸ್ಯೆ, ಕಾರಣವನ್ನು ಹೇಳಿಕೊಂಡು ಬಾಲಕಾರ್ಮಿಕರಾಗಬೇಡಿ, ನಿಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾವಂತರಾಗಿ ತದನಂತರ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಸತ್ಯಭಾಮ.ಸಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನ್ನು ಮನೆಯಲ್ಲಿ ಅಲ್ಲದೆ ಹೊರಗೆ ಹಣಕ್ಕಾಗಿ ಒತ್ತಾಯಪೂರ್ವಕವಾಗಿ ದುಡಿಸುವಂತಹದ್ದು ಬಾಲಕಾರ್ಮಿಕ ಪದ್ಧತಿಯಾಗಿದೆ. ಈ ರೀತಿಯಲ್ಲಿ ಎಲ್ಲಿಯಾದರೂ ಬಾಲ ಮಕ್ಕಳ ದುಡಿಸಿಕೊಳ್ಳುವುದು ಕಂಡು ಬಂದರೆ ವಿದ್ಯಾರ್ಥಿಗಳು ಆಡಳಿತಾತ್ಮಕ ಅಧಿಕಾರಿಗಳಿಗೆ ಅಥವಾ 1098 ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಕೋಲಾರದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಚೌಡಪ್ಪ ಎಸ್.ಹೆಚ್ ಅವರು ನಮ್ಮ ದೇಶದಲ್ಲಿ ಹತ್ತರಲ್ಲಿ ಒಂದು ಮಗು ಮಕ್ಕಳ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಕೃಷಿ ಕೆಲಸಗಳು, ಗ್ಯಾರೇಜ್, ಹೋಟೆಲ್, ಬೇಕರಿ ಹೀಗೆ ಅನೇಕ ಭಾಗಗಳಲ್ಲಿ ಹೆಚ್ಚು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸಗಳನ್ನು ಮಾಡಿಸಿಕೊಳ್ಳುವಂತಹ ಮಾಲೀಕರುಗಳಿಗೆ ಪೋಷಕರುಗಳಿಗೆ ಸರ್ಕಾರ ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಯನ್ನು ಸಹ ವಿಧಿಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸುತ್ತಿದೆ.
ಮತ್ತು ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ತಪ್ಪಿಸಲು ಸರ್ಕಾರ ಅನೇಕ ರೀತಿಯ ಕಾಯ್ದೆ ಕಾನೂನುಗಳನ್ನ ಜಾರುಗೊಳಿಸಿದೆ ಅವುಗಳಲ್ಲಿ ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಿಶೋರ ಕಾರ್ಮಿಕ ನಿಷೇಧ ಕಾಯ್ದೆ ಹೀಗೆ ಅನೇಕ ರೀತಿಯ ಕಾಯ್ದೆ ಕಾನೂನುಗಳನ್ನು ರೂಪಿಸಿದೆ ಅವುಗಳ ಕುರಿತಾಗಿ ಪ್ರತಿಯೊಂದು ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿಯನ್ನು ತಿಳಿಸಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಣಿ ಜಿ.ಕೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಮಧುಕುಮಾರಿ ಎಂ.ಎಸ್, ಪ್ರಾದೇಶಿಕ ಉಪಕಾರ್ಮಿಕ ಆಯುಕ್ತರಾದ ಗುರುಪ್ರಸಾದ್ ಹೆಚ್.ಎಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನ ಕೆ.ಎನ್ ಹಾಗೂ ವಿವಿಧ ಶಾಲೆಯ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




