ತಿರುವನಂತಪುರ: ಜಗತ್ತಿನ ಅತಿ ದೊಡ್ಡ ಸರಕು ಸಾಗಣೆ ಹಡಗು ‘ಎಂಎಸ್‌ಸಿ ಇರಿನಾ’ ಇಲ್ಲಿನ ವಿಳಿಂಜಂ ಅಂತರರಾಷ್ಟ್ರೀಯ ಬಂದರಿಗೆ ಸೋಮವಾರ ಬೆಳಿಗ್ಗೆ ತಲುಪಿತು ಎಂದು ಬಂದರು ಅಧಿಕಾರಿಗಳು ತಿಳಿಸಿದರು.
ಸಾಂಪ್ರದಾಯಿಕ ಜಲನಮನ ಸಲ್ಲಿಸುವ ಮೂಲಕ ಹಡಗನ್ನು ಬರಮಾಡಿಕೊಳ್ಳಲಾಯಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಏಷ್ಯಾ ಮತ್ತು ಯುರೋಪ್ ಮಧ್ಯೆ ದೊಡ್ಡ ಪ್ರಮಾಣದ ಸರಕುಗಳ ಸಾಗಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಹಡಗನ್ನು ವಿನ್ಯಾಸಗೊಳಿಸಲಾಗಿದೆ. ಈ ಹಡಗು ವ್ಯಾಪಾರ ಮಾರ್ಗಗಳು ಮತ್ತು ಸಾಗಣೆಯ ದಕ್ಷತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಂದರು ಪ್ರಕಟಣೆಯಲ್ಲಿ ತಿಳಿಸಿದೆ.
ವಿಳಿಂಜಂ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 2ರಂದು ರಾಷ್ಟ್ರಕ್ಕೆ ಸಮರ್ಪಿಸಿದ್ದರು.