ಮಂಗಳೂರು: ಸಶಸ್ತ್ರ ಮೀಸಲು ಪೋಲಿಸ್ ಪಡೆಯಲ್ಲಿ ಖಾಲಿ ಇರುವ (ಪುರುಷ & ತೃತೀಯ ಲಿಂಗ ಪುರುಷ) 3064 ಹುದ್ದೆಗಳಿಗೆ ಜ.28ರಂದು ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಮೂಡುಬಿದಿರೆಯಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಜ.28ರಂದು ಬೆಳಗ್ಗೆ 11ರಿಂದ 12:30ರ ತನಕ ನಡೆಯಲಿರುವ ಪರೀಕ್ಷೆಗೆ ಸುಮಾರು 17000 ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ.


ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಕೆಲ ಸಾಮಾನ್ಯ ಸೂಚನೆಗಳನ್ನು ನೀಡಲಾಗಿದೆ.
1. ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 120 ನಿಮಿಷಗಳ ಮುಂಚೆ, ಅಂದರೆ 9 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
2.ಇಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್, ಬ್ಲೂಟುತ್, ಪೇಪರ್ ತೊಂಡು, ಪುಸ್ತಕ, ನೋಟ್ ಇತ್ಯಾದಿಗಳನ್ನು ಕೊಠಡಿಯ ಒಳಗೆ ಒಯ್ಯುವಂತಿಲ್ಲ.
3.ಅಭ್ಯರ್ಥಿಗಳನ್ನು ಅವರವರ ಪ್ರವೇಶ ಪತ್ರದೊಂದಿಗೆ ಯಾವುದಾದರೂ ಗುರುತಿನ ಚೀಟಿ ಉದಾ: ಚಾಲನಾ ಅನುಜ್ಞಾ ಪತ್ರ, ಪಾಸ್ಪೋಟ್/ಆಧಾರ್ ಕಾರ್ಡ್/ಪಾನ್ ಕಾರ್ಡ್/ಓಟರ್ ಐಡಿ(EPIC)ಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುವುದು.
4.ಪುರುಷ ಹಾಗು ತೃತಿಯ ಲಿಂಗ ಪುರುಷರು ಅರ್ಧ ತೋಳಿನ ಕಾಲರ್ ರಹಿತ ಶರ್ಟ್ ಗಳನ್ನು ಧರಿಸಬೇಕು. ಜಿಪ್ ಪಾಕೆಟ್, ದೊಡ್ಡ ಬಟನ್ ಇರುವ ಶರ್ಟ್ ಧರಿಸುವಂತಿಲ್ಲ.
5.ಜೀನ್ಸ್ ಪ್ಯಾಂಟ್ ನಂತಹ ಹೆಚ್ಚಿನ ಜೇಬುಗಳಿರುವ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ.
6.ಷೂಗಳಿಗೂ ನಿಷೇಧವಿದ್ದು, ತೆಳುವಾದ ಅಡಿಯುಳ್ಳ ಚಪ್ಪಲಿಗಳನ್ನು ಧರಿಸತಕ್ಕದ್ದು.
7.ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದು ನಿಷೇದಿಸಿದೆ, ಇಂತಹ ಬೆಲೆಬಾಳುವ ವಸ್ತುಗಳ ಭದ್ರತೆ ವ್ಯವಸ್ಥೆಯು ಪರೀಕ್ಷಾ ಕೇಂದ್ರದಲ್ಲಿ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳಿಗೆ ಇಂತಹ ಬೆಲೆಬಾಳುವ ವಸ್ತುಗಳನ್ನು ತಮ್ಮ ಮನೆಯಲ್ಲಿಯೇ ಬಿಟ್ಟುಬರಲು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




