ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ನಾಲ್ಕು ದಶಕಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಅವರು, ಯಕ್ಷಗಾನ ಪ್ರಸಂಗದಲ್ಲಿ ತನ್ನ ಕೊನೆಯ ಪಾತ್ರ ನಿರ್ವಹಣೆ ಮುಗಿಸಿ ಕೊನೆಯುಸಿರೆಳೆದಿದ್ದಾರೆ.
ನಿನ್ನೆ (ಮೇ 1) ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮಿಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ ರಾತ್ರಿ ಸುಮಾರು 12.25ಕ್ಕೆ ಚೌಕಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ಯಾವುದೇ ಪಾತ್ರ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಿರಿಯ ಸವ್ಯಸಾಚಿ ಕಲಾವಿದರಾಗಿದ್ದರು.
ಚೌಕಿಯಿಂದಲೇ ನಿರ್ಗಮಿಸಿದ ಹಿರಿಯ ಪುಣ್ಯಾತ್ಮರ ಸಾಲಿಗೆ ಗಂಗಾಧರರೂ ಸೇರಿದಂತಾಗಿದೆ. ಪ್ರಸಂಗದ ಕೊನೆಯ ದೃಶ್ಯದ ಮೊದಲಿನ ಭಾಗದಲ್ಲಿ ಇವರ ಪಾತ್ರ ನಿರ್ವಹಣೆ ಇತ್ತು. ನಿರ್ವಹಣೆ ಮುಗಿಸಿ ವೇಷ ಕಳಚುತಿದ್ದಂತೆ ಹೃದಯಾಘಾತ ಸಂಭವಿಸಿದೆ.