ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

Share with

ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಮಹಾರಾಷ್ಟ್ರದ ಮೂರು ಕಡೆಗಳಲ್ಲಿ ಪ್ರದರ್ಶನ

ಉಡುಪಿ: ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ ಇದೀಗ ಗಡಿಗಳನ್ನು ದಾಟಿ ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧವಾಗಿದೆ. ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಮಹಾರಾಷ್ಟ್ರದ ಮೂರು ಕಡೆಗಳಲ್ಲಿ ಮರಾಠಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಚಕ್ರವ್ಯೂಹ ಪ್ರಸಂಗವನ್ನು ಆಯ್ದುಕೊಂಡಿರುವ ಹವ್ಯಾಸಿ ಕಲಾವಿದರು, ಕನ್ನಡದ ಕಂಪನ್ನು ರಂಗಭೂಮಿಯ ತವರು ಮಹಾರಾಷ್ಟ್ರದಲ್ಲಿ ಪಸರಿಸಲಿದ್ದಾರೆ. ಈವರೆಗೆ ಕನ್ನಡ, ತುಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಯಕ್ಷಗಾನದ ಪ್ರದರ್ಶನ ನಡೆದಿದೆ. ಆದರೆ, ಹಿಮ್ಮೇಳದ ಭಾಗವತಿಕೆ ಸಹಿತ ಸಂಭಾಷಣೆ ಎಲ್ಲವೂ ಮರಾಠಿ ಭಾಷೆಯಲ್ಲಿ ಸಂಯೋಜನೆಗೊಂಡು ಪ್ರದರ್ಶನ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ.
ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಹವ್ಯಾಸಿ ಕಲಾವಿದರು ಈ ಪ್ರದರ್ಶನದಲ್ಲಿ ತರಬೇತಿ ಪಡೆದು ಭಾಗವಹಿಸುತ್ತಿದ್ದಾರೆ. ಸಂಭಾಷಣೆಯನ್ನು ಸಂಪೂರ್ಣ ಕಂಠಪಾಠ ಮಾಡಿ ಮರಾಠಿಗರು ಕೂಡಾ ತಲೆದೂಗುವಂತೆ ಪ್ರದರ್ಶನ ನಡೆಸಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಈ ಅಪರೂಪದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಕನ್ನಡದ ಕಲೆ ತನ್ನ ಮೂಲ ಸ್ವರೂಪದಲ್ಲೇ ಮರಾಠಿ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿದೆ.


Share with

Leave a Reply

Your email address will not be published. Required fields are marked *