ಯಶ್, ರಣ್ಬೀರ್ ನಟನೆಯ ‘ರಾಮಾಯಣ’ಕ್ಕೆ ಯುವ ಸ್ಟಾರ್ ಎಂಟ್ರಿ

Share with

ಭಾರತೀಯ ಚಿತ್ರರಂಗದ ಅತಿ ದೊಡ್ಡ ಮತ್ತು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ ಯಶ್ (Yash), ರಣ್ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ. ಸಿನಿಮಾನಲ್ಲಿ ಹಲವಾರು ಸ್ಟಾರ್ ನಟರು, ಪ್ರತಿಭಾವಂತ ನಟ-ನಟಿಯರು ಪಾತ್ರವಹಿಸಿದ್ದಾರೆ. ಇದೀಗ ಈ ಸಿನಿಮಾದ ತಾರಾಬಳಗಕ್ಕೆ ಮತ್ತೊಬ್ಬ ಪ್ರತಿಭಾವಂತ ನಟನ ಸೇರ್ಪಡೆ ಆಗಿದೆ. ಇತ್ತೀಚೆಗೆ ‘ಕಿಲ್’ ಸಿನಿಮಾದಲ್ಲಿ ತನ್ನ ವಿಲನ್ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದ ರಾಘವ್ ಜುಯಲ್, ಈಗ ನಿತೇಶ್ ತಿವಾರಿ ಅವರ ಈ ಪೌರಾಣಿಕ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

ರಾಘವ್ ಜುಯಲ್ ‘ರಾಮಾಯಣ’ ಚಿತ್ರತಂಡವನ್ನು ಸೇರಿರುವುದು ದೃಢಪಟ್ಟಿದ್ದು, ಈ ಹಿಂದೆ ನಟ ವಿಕ್ರಾಂತ್ ಮಸ್ಸಿಗೆ ನೀಡಲಾಗಿದ್ದ ಪಾತ್ರವನ್ನು ಇದೀಗ ರಾಘವ್ ಜುಯಲ್ ಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಅಂದಹಾಗೆ ರಾಘವ್ ಅವರದ್ದು ‘ರಾಮಾಯಣ’ ಸಿನಿಮಾನಲ್ಲಿ ಮೇಘನಾಥನ ಪಾತ್ರವಂತೆ. ಅಂದರೆ ಯಶ್ ಅವರ ಪುತ್ರನ ಪಾತ್ರದಲ್ಲಿ ರಾಘವ್ ಜುಯಲ್ ನಟಿಸಲಿದ್ದಾರೆ. ರಾಘವ್ ಅವರು ಮೇಘನಾಥನ ಪಾತ್ರಕ್ಕೆ ಸೂಟ್ ಆಗುತ್ತಾರೆ ಎಂಬುದು ನೆಟ್ಟಿಗರ ನಂಬಿಕೆ.

‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ) ಮತ್ತು ಯಶ್ (ರಾವಣ) ಅಭಿನಯಿಸುತ್ತಿರುವುದು ಅಧಿಕೃತಗೊಂಡಿದೆ. ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ರಾಘವ್ ಜುಯಲ್ ಅವರಂತಹ ಯುವ ನಟನ ಸೇರ್ಪಡೆಯು ಚಿತ್ರದ ಗತ್ತು ಮತ್ತು ಸ್ಟಾರ್ ವ್ಯಾಲ್ಯೂ ಅನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ‘ಕಿಲ್’, ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ರಾಘವ್‌ಗೆ ಇದು ವೃತ್ತಿಜೀವನದ ಅತಿ ದೊಡ್ಡ ಬ್ರೇಕ್ ಆಗಲಿದೆ.

ಒಬ್ಬ ಸಾಮಾನ್ಯ ಸೈಡ್ ಡ್ಯಾನ್ಸರ್ ಆಗಿ ವೃತ್ತಿ ಆರಂಭಿಸಿದ ರಾಘವ್ ಈಗ ಭಾರತದ ಅತ್ಯಂತ ದುಬಾರಿ ಸಿನಿಮಾನಲ್ಲಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ರಾಘವ್ ಇದೀಗ ‘ರಾಮಾಯಣ’ ಅದರ ಜೊತೆಗೆ ‘ಎಬಿಸಿಡಿ 3’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದಾದ ಬಳಿಕ ‘ಬ್ಯಾಡ್ಸ್ ಆಫ್ ಬಾಲಿವುಡ್ ಸೀಸನ್ 02’ನಲ್ಲೂ ಸಹ ಅವರು ನಟಿಸಲಿದ್ದಾರೆ. ‘ರಾಮಾಯಣ’ ಸಿನಿಮಾ ಇದೇ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.


Share with

Leave a Reply

Your email address will not be published. Required fields are marked *