ಚೆನ್ನೈ: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ಚೆನ್ನೈನ ಬೆಸೆಂಟ್ ನಗರದಲ್ಲಿ 24 ವರ್ಷದ ಪೇಂಟರ್ ಮೇಲೆ ಬಿಎಂಡಬ್ಲ್ಯು ಕಾರನ್ನು ಹರಿಸಿದ ಪರಿಣಾಮ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಗೆಳತಿಯ ಜತೆ ಪ್ರಯಾಣಿಸುತ್ತಿದ್ದ ಮಾಧುರಿ ಅತೀ ವೇಗವಾಗಿ ಬಿಎಂಡಬ್ಲ್ಯು ಕಾರನ್ನು ಓಡಿಸಿದ್ದು, ಕಾರು ಸೂರ್ಯ (24ವರ್ಷ) ಎಂಬಾತನ ಮೇಲೆ ಹಾಯ್ದು ಹೋಗಿತ್ತು. ಗಂಭೀರವಾಗಿ ಗಾಯಗೊಂಡ ಸೂರ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಆತನ ಉಸಿರು ಹಾರಿ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಪ್ರಾಪ್ತ ಬಾಲಕನೊಬ್ಬ ಪೋರ್ಶೆ ಕಾರನ್ನು ಚಲಾಯಿಸಿ ಇಬ್ಬರು ಮಹಿಳಾ ಐಟಿ ಉದ್ಯೋಗಿಗಳ ಸಾವಿಗೆ ಕಾರಣನಾಗಿದ್ದ ಘಟನೆ ವಿವಾದ ಹುಟ್ಟು ಹಾಕಿದ್ದ ಬೆನ್ನಲ್ಲೇ ಚೆನ್ನೈನಲ್ಲಿ ಮತ್ತೊಂದು ಹೈಪ್ರೊಫೈಲ್ ಪ್ರಕರಣ ನಡೆದಿದೆ.
ಕಾರು ಅಪಘಾತವಾದ ಕೂಡಲೇ ಮಾಧುರಿ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಆಕೆಯ ಗೆಳತಿ ಸ್ಥಳೀಯರ ಜತೆ ವಾಗ್ವಾದದಲ್ಲಿ ತೊಡಗಿಕೊಂಡಿರುವುದಾಗಿ ವರದಿ ವಿವರಿಸಿದೆ. ಮೃತ ಸೂರ್ಯ ಇತ್ತೀಚೆಗಷ್ಟೇ ವಿವಾಹವಾಗಿದ್ದ.