ಹ್ಯಾಕರ್‌ಗಳ ಸುಳಿಗೆ ಸಿಲುಕಿ ಬಂಧಿಯಾಗಿದ್ದ ಕಡಬದ ಯುವಕ ಬಂಧಮುಕ್ತ: ಸ್ವದೇಶಕ್ಕೆ ಆಗಮನ..!

Share with

ಕಡಬ: ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಕಳೆದ 11 ತಿಂಗಳಿನಿಂದ ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಬಂಧಿಯಾಗಿದ್ದ ಕಡಬದ ಯುವಕ ಚಂದ್ರಶೇಖರ್‌ ಅವರು ಬಂಧಮುಕ್ತವಾಗಿ, ನ.20ರಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಬಂಧಿಯಾಗಿದ್ದ ಕಡಬದ ಯುವಕ ಚಂದ್ರಶೇಖರ್‌.

ಚಂದ್ರಶೇಖರ್‌ ಅವರನ್ನು ಸೌದಿ ಅರೇಬಿಯಾದ ರಿಯಾದ್‌ನಿಂದ ಅಲ್ಲಿನ ಪೊಲೀಸರು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಸಂಜೆ ವೇಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್‌ ಅವರು ಕೆಲಸದಲ್ಲಿ ಪದೋನ್ನತಿ ಪಡೆದು ಸೌದಿ ಅರೇಬಿಯಾಕ್ಕೆ 2022ರಲ್ಲಿ ತೆರಳಿದ್ದರು. ಅಲ್ಲಿ 2022ರ ನವೆಂಬರ್‌ನಲ್ಲಿ ಮೊಬೈಲ್‌ ಮತ್ತು ಸಿಮ್‌ ಖರೀದಿಸಲು ಅಂಗಡಿಯೊಂದಕ್ಕೆ ಭೇಟಿ ನೀಡಿದ್ದು, ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು ಸಹಿಯನ್ನು ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್‌ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿದ್ದು ಅದನ್ನು ತೆರೆದು ಚಂದ್ರಶೇಖರ್‌ ಅವರು ನೋಡಿದ್ದರು. 2 ದಿನಗಳ ನಂತರ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿಯನ್ನು ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್‌ ಅವರನ್ನು ಬಂಧಿಸಿದ್ದರು.

ಚಂದ್ರಶೇಖರ್‌ ಅವರಿಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆಯನ್ನು ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್‌ ಖಾತೆಗೆ 22 ಸಾವಿರ ರಿಯಲ್‌ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಆ ಹಣ ವರ್ಗಾವಣೆಯಾಗಿತ್ತು.

ಇನ್ನು ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್‌ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರನ್ನು ನೀಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಬಂಧನವಾಗಿರುವ ಬಗ್ಗೆ ಚಂದ್ರಶೇಖರ್‌ ಅವರ ಗೆಳೆಯರು ಮನೆಯವರಿಗೆ ತಿಳಿಸಿದ್ದರು. ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ದೂರವಾಣಿ ಕರೆ ಮಾಡಲು ಚಂದ್ರಶೇಖರ್‌ ಅವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿನ ಸ್ನೇಹಿತರಿಗೂ ಅವರನ್ನು ಭೇಟಿಯಾಗಲು ಅವಕಾಶವಿರಲಿಲ್ಲ. ಇದೀಗ ಚಂದ್ರಶೇಖರ್‌ ಅವರು ನಿರಪರಾಧಿ ಎಂದು ತಿಳಿದು ಬಂಧಮುಕ್ತ ಮಾಡಲಾಗಿದೆ.

ಐತ್ತೂರು ಗ್ರಾಮದ ಮೂಜೂರು ನಿವಾಸಿ ದಿ| ಕೆಂಚಪ್ಪ ಗೌಡ – ಹೇಮಾವತಿ ದಂಪತಿಯ ಕೊನೆಯ ಪುತ್ರ ಚಂದ್ರ ಶೇಖರ್‌ ಅವರ ಸ್ನೇಹಿತರು 10 ಲಕ್ಷ ರೂಪಾಯಿ ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂಪಾಯಿ ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ, ಮಾಧ್ಯಮ ವರದಿಯ ಬಳಿಕ ಅಲ್ಲಿನ ಕಂಪೆನಿ ಎಚ್ಚೆತ್ತುಕೊಂಡು ನಿರಪರಾಧಿ ಚಂದ್ರಶೇಖರ್‌ ಅವರ ಬಿಡುಗಡೆಗೆ ಸಹಕರಿಸಿತ್ತು. ಚಂದ್ರಶೇಖರ್‌ ಬಿಡುಗಡೆಗೆ ಮಡಿಕೇರಿಯ ಬಿ.ಆರ್‌ ಅರುಣ್‌ ಕುಮಾರ್‌ ಮತ್ತು ಮಂಗಳೂರಿನ ಕಬೀರ್‌ ನಿರಂತರವಾಗಿ ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *