ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯದಿಂದಾಗಿ ಚಿಕಿತ್ಸೆ ಸಿಗದೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ರವಿವಾರ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ತಾಲೂಕಿನ ಹೊಸಪೇಟೆ ಗ್ರಾಮದ ಕವಿತಾ (21) ಮೃತ ದುರ್ದೈವಿ.
ಕಾಫಿ ಹಣ್ಣು ಕೊಯ್ಯುವಾಗ ಮರ ಬಿದ್ದು ಗಾಯಗೊಂಡಿದ್ದ ಕವಿತಾರನ್ನು ಆಸ್ಪತ್ರೆಗೆ ಕರೆತಂದಾಗ, ವೈದ್ಯರಿಲ್ಲದೆ, ನರ್ಸ್ ಹಾಗೂ ಕಾಂಪೌಂಡರ್ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.
ಸ್ಕ್ಯಾನಿಂಗ್ ಅಥವಾ ಎಕ್ಸ್-ರೇ ಮಾಡದೆ ಕೇವಲ ಬ್ಯಾಂಡೇಜ್ ಹಾಕಿ ಶಿವಮೊಗ್ಗಕ್ಕೆ ರೆಫರ್ ಮಾಡಲಾಗಿತ್ತು. ಆದರೆ ಹೋಗುವ ಮಾರ್ಗಮಧ್ಯೆ ತರೀಕೆರೆ ಬಳಿ ಯುವತಿ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಜಿಲ್ಲಾ ಸರ್ಜನ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಶವದೊಂದಿಗೆ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.




