ಮಂಗಳೂರು: ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ ರವಿವಾರ ಬಿ.ಸಿ.ರೋಡ್‌ನ ಗಾಣದಪಡ್ಪುದ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿಶಿಷ್ಟವಾದ ತುಳುನಾಡಿನ ಗುತ್ತುಮನೆ ಮಾದರಿಯ ಸಭಾಮಂಟಪದಲ್ಲಿ ಆಯೋಜಿಸಲಾಗಿತ್ತು. ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ತಂಬಿಗೆಯಲ್ಲಿ ನೀರು, ಓಲೆಬೆಲ್ಲ, ವೀಳ್ಯೆದೆಲೆ-ಅಡಿಕೆ ನೀಡಿ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿಯವರು, ಉಳಿದ ಅತಿಥಿಗಳೊಂದಿಗೆ ಸೇರಿ ನಾಗಬೆರ್ಮೆರೆನ ಪಾಡ್ದನದೊಂದಿಗೆ ಸ್ವಸ್ತಿಕವನ್ನು ಇಟ್ಟು, ದೀವಟಿಗೆ ಉರಿಸಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಸಂಜೀವ ಪೂಜಾರಿಯವರು ಮಾತನಾಡಿ, ಸೇಸಪ್ಪ ಕೋಟ್ಯಾನ್ ಅವರನ್ನು ನೆನಪು ಮಾಡಿಕೊಂಡರು. ಬಿಲ್ಲವ ಸಂಘ ಮತ್ತು ಯುವವಾಹಿನಿ ಎರಡೂ ಸಂಸ್ಥೆಗಳು ಒಂದೇ ಕುಟುಂಬದಂತೆ. ಯಾರಿಗೂ ಭೇದ-ಭಾವವಿಲ್ಲ. ಹಿಂದೆ ತುಳುವರಿಗೆ ಗದ್ದೆ ಉತ್ತು ಬಿತ್ತುವ ಬೇಸಾಯದ ಕೆಲಸ ಮಾತ್ರ ಗೊತ್ತಿತ್ತು. ಆದರೆ ಈಗ ವೈವಿಧ್ಯಮಯ ಕೆಲಸ ಕಾರ್ಯಗಳಲ್ಲಿ ತುಳುವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಹಳಷ್ಟು ಶಿಸ್ತಿನಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಮುಖ್ಯ ಅತಿಥಿಯಾದ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಲೋಕೇಶ್ ಕೋಟ್ಯಾನ್ ಅವರು ಮಾತನಾಡಿ, ತುಳುವ ಶೈಲಿಯ ವೇದಿಕೆ ನೋಡಿ ಬಹಳ ಸಂತೋಷವಾಯಿತು. ಈ ಮೂಲಕ ತುಳು ಸಂಪ್ರದಾಯವನ್ನೇ ಮೈಗೂಡಿಸಿಕೊಂಡಿರುವ ತುಳುವರ ಕೂಟದಲ್ಲಿ ಭಾಗವಹಿಸುವ ಸುಯೋಗ ದೊರಕಿದೆ. ಜೊತೆಗೆ ಯುವವಾಹಿನಿಯ ಪ್ರತಿಭೆಗಳಿಗೆ ಸುಂದರ ವೇದಿಕೆ ದೊರಕಿರುವುದು ಸಂತೋಷವೆನಿಸಿದೆ. ಸಮಾಜಮುಖಿ ಸೇವೆ ಸಲ್ಲಿಸುತ್ತಾ ರಾಜ್ಯೋತ್ಸವ ಪ್ರಶಸ್ತಿ ಪಡೆದೆರುವ ಸಂಸ್ಥೆ ಯುವವಾಹಿನಿಯ ಕಾರ್ಯಗಳು ಶ್ಲಾಘನೀಯ ಎಂದರು.
ಮತ್ತೊಬ್ಬ ಅತಿಥಿ ನಮ್ಮಕುಡ್ಲ ಚಾನಲ್‌ನ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರ ಮಾತನಾಡಿ, ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಿದ್ದೇ ಯುವವಾಹಿನಿ ಸಂಸ್ಥೆ. ಈಗ ಬಹಳಷ್ಟು ಸಂಘಸಂಸ್ಥೆಗಳು ಆಟಿಡೊಂಜಿ ದಿನ, ಕೆಸರ್‌ಡೊಂಜಿ ದಿನ ಕಾರ್ಯಕ್ರಮಗಳನ್ನು ಆಯೋಜಿಸಿತ್ತಿದೆ. ಹಿಂದಿನವರ ಕಷ್ಟದ ಬದುಕನ್ನು ನಾವೂ ಕಣ್ಣಾರೆ ಕಂಡವರು. ಕರಾವಳಿಯಲ್ಲಿ ಭತ್ತದ ಬೆಳೆ ಮುಖ್ಯವಾದ ಕಾಲಘಟ್ಟದಲ್ಲಿ ನಾಲ್ಕು ಹೊತ್ತು ಮನೆಮಂದಿ ಗಂಜಿ ಉಣ್ಣುತ್ತಿರುವ ಕಾಲವದು. ಆದರೆ ಈಗ ಅನ್ನ ಉಣ್ಣುವುದು ಕಡಿಮೆಯಾಗಿ ಉಳಿದ ಆಹಾರ ಪದಾರ್ಥಗಳ ಸೇವನೆ ಹೆಚ್ಚಾಗಿದೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಯುವವಾಹಿನಿಯ ಪ್ರೋತ್ಸಾಹ ಮೆಚ್ಚುವಂತದ್ದು ಎಂದರು.
ಬಳಿಕ ಲೀಲಾಕ್ಷ ಕರ್ಕೇರ ಹಾಗೂ ದಿನೇಶ್ ಸುವರ್ಣ ರಾಯಿಯವರು ಚೆನ್ನೆಮಣೆ ಆಡಿ ಚೆನ್ನೆಮಣೆ ಸ್ಪರ್ಧೆಗೆ ಚಾಲನೆ ನೀಡಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿ ಚೇತನ್ ಮುಂಡಾಜೆ, ಸಂಚಾಲಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಧ್ಯಕ್ಷತೆ ವಹಿಸಿರುವ ದಿನೇಶ್ ಸುವರ್ಣ ರಾಯಿಯವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಸಂಚಾಲಕ ನವೀನ್ ಪೂಜಾರಿ ಸ್ವಾಗತಿಸಿದರು.