ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಮಾರಕ ವೈರಸ್‌ಗಳು ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯನ್ನು ನಡೆಸಿ, ವೈರಸ್ ಹರಡದಂತೆ ತಡೆಯಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದ್ದಾರೆ.
ಆರೋಗ್ಯ ಇಲಾಖೆಯು ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸಮೀಪದ ಸೊಳ್ಳೆಗಳನ್ನು ಲ್ಯಾಬ್ನಲ್ಲಿ ಪರೀಕ್ಷಿಸಿತ್ತು. ಆಗ ಅಲ್ಲಿನ ಸೊಳ್ಳೆಗಳಲ್ಲಿ ವೈರಸ್ ಪತ್ತೆಯಾಗಿದೆ. ಈಗಾಗಲೇ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದೆ. ಆದರೆ ಮನುಷ್ಯರಲ್ಲಿ ರೋಗದ ಲಕ್ಷಣಗಳು ಗೋಚರಿಸಿಲ್ಲ. ಗ್ರಾಮ ಸೇರಿದಂತೆ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಎಚ್ಚರಿಕೆ ವಹಿಸುತ್ತಿದೆ.
ಈ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಲಿದೆ. ಅದರಲ್ಲೂ ಮುಖ್ಯವಾಗಿ, ಗರ್ಭಿಣಿಯರು ಸೇರಿದಂತೆ ಇತರರ ಮೇಲೆ ಹೆಚ್ಚು ನಿಗಾ ವಹಿಸುತ್ತಿದೆ. ಜಿಲ್ಲೆಯ ನಾಗರಿಕರಲ್ಲಿ ಝೀಕಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಝೀಕಾ ಎಂಬುದು ಒಂದು ವೈರಸ್ ಸೋಂಕಾಗಿದ್ದು, ಇದು ಡೆಂಗೀ, ಚಿಕೂನ್‌ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ನಿಂತ ನೀರು ಈ ಸೊಳ್ಳೆಗಳ ಉತ್ಪತ್ತಿ ತಾಣವಾಗಿರುತ್ತದೆ. ಜ್ವರ, ದದ್ದು, ತಲೆನೋವು, ಕೀಲುನೊವು, ಆಯಾಸ, ಕೆನ್ನೆಗಳ ಊತ, ಬೆವರುವುದು, ತಣ್ಣಗಾಗುವುದು, ವಾಂತಿ, ಕೆಂಪಾದ ಕಣ್ಣುಗಳು ಇತ್ಯಾದಿ ಲಕ್ಷಣಗಳು ಗೋಚರಿಸುತ್ತವೆ. ಇನ್ನು ಬಹುತೇಕ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಹೀಗಾಗಿ ಜ್ವರದಂತಹ ಸಾಮಾನ್ಯವಾದ ಲಕ್ಷಣ ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮವಾದ ಮಾರ್ಗವಾಗಿದೆ.