ಮುಂಗಡ ಬುಕ್ಕಿಂಗ್ ನಿಂದಲೇ ಭರ್ಜರಿ ಗಳಿಕೆ ಮಾಡಿದ ಕಾಂತಾರ -1

Share with

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ “ಕಾಂತಾರ-1′ ಚಿತ್ರದ ಬುಕ್ಕಿಂಗ್ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಬುಕ್ಕಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮಲ್ಟಿಪ್ಲೆಕ್ಸ್‌ಗಳ ಶೋಗಳ ಟಿಕೆಟ್‌ಗಳು ಸೋಲ್ಡ್‌ ಔಟ್ ಆಗಿವೆ.

ಕೆಲವು ಮಲ್ಟಿಪ್ಲೆಕ್ಸ್‌ಗಳು 20ಕ್ಕೂ ಹೆಚ್ಚು ಶೋಗಳನ್ನು ನೀಡುವ ಮೂಲಕ ಪ್ರೇಕ್ಷಕರ “ಕಾಂತಾರ” ಕ್ರೇಜ್ ತಣಿಸುವ ಪ್ರಯತ್ನ ಮಾಡಿವೆ. ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಲಿದ್ದು, ಸಿಂಗಲ್ ಸ್ಟೀನ್ ಗಳು ಮೊದಲ ದಿನ 6 ಶೋಗಳನ್ನು ಮಾಡಲು ಮುಂದಾಗಿವೆ. ಇದರ ಜೊತೆಗೆ ನಿರೀಕ್ಷೆಯಂತೆಯೇ ಚಿತ್ರದ ಟಿಕೆಟ್‌ ದರವನ್ನು ಕುಡಾ ಮಲ್ಟಿಪ್ಲೆಕ್ಸ್‌ಗಳು ಗಗನಕ್ಕೇರಿಸಿವೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಕಾಂತಾರ: ಭರ್ಜರಿ ನಿರೀಕ್ಷೆ

ಹುಟ್ಟಿಸಿರುವ ಕಾಂತಾರ ಚಿತ್ರದ ಕ್ರೇಜ್‌ನ ಲಾಭ ಪಡೆಯಲು ಮಲ್ಟಿಪ್ಲೆಕ್ಸ್ ತುದಿಗಾಲಿನಲ್ಲಿ ನಿಂತಿದ್ದವು. ಅದರಂತೆ ಈಗ ಚಿತ್ರದ ಟಿಕೆಟ್ ದರವನ್ನು ಕೂಡಾ ದುಪ್ಪಟ್ಟು ಮಾಡಿವೆ. 330 ರೂಪಾಯಿಂದ 400 ರೂಪಾಯಿವರೆಗೂ ಟಿಕೆಟ್ ದರ ಏರಿಸಿವೆ. ಪ್ರೈಮ್, ಕ್ಲಾಸಿಕ್ ಸೀಟುಗಳ ಟಿಕೆಟ್ ದರಗಳಲ್ಲಿ ವ್ಯತ್ಯಯವಿದ್ದು, ನಿರೀಕ್ಷಿತ ಚಿತ್ರದ ಟಿಕೆಟ್ ಭಾರ ಪ್ರೇಕ್ಷಕನ ಜೇಬಿಗೆ ಬಿದ್ದಿದೆ.

ಏಕರೂಪ ಟಿಕೆಟ್ ದರದ ಕುರಿತಾದ ಸರ್ಕಾರದ ಆದೇಶದ ಬೆನ್ನಲ್ಲೇ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ದರ ಇಳಿಸಿದ್ದು, ಪ್ರೇಕ್ಷಕರಿಗೆ ಖುಷಿ ನೀಡಿತ್ತು. 200 ರೂ. ಟಿಕೆಟ್ ದರ ಹಾಗೂ ಅದರ ಮೇಲಿನ ಜಿಎಸ್‌ಟಿ ಸೇರಿಸಿ 236 ರೂಪಾಯಿ ದರವನ್ನು ಮಲ್ಟಿಪ್ಲೆಕ್ಸ್‌ಗಳು ನಿಗದಿಪಡಿಸಿದ್ದವು. ಈ ಮೂಲಕ ಪ್ರೇಕ್ಷಕರ ಮೇಲಿನ ಟಿಕೆಟ್ ಹೊರೆ ಇಳಿದಂತಾಗಿತ್ತು. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ.. ಹೀಗೆ ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲೂ 236 ರೂ. ಟಿಕೆಟ್ ನಿಗದಿ ಮಾಡಲಾಗಿತ್ತು. ಈ ಮೂಲಕ ಫ್ಯಾಮಿಲಿ ಆಡಿಯನ್ಸ್ ನಿರಾಳರಾಗಿದ್ದರು. ಆದರೆ, ಈಗ ಆ ಖುಷಿ ಮಾಯವಾಗಿದ್ದು, ಕೋರ್ಟ್‌ನ ಮಧ್ಯಂತರ ಆದೇಶ ಬೆನ್ನಲ್ಲೇ ಮಲ್ಟಿಪ್ಲೆಕ್ಸ್‌ಗಳು ಮತ್ತೆ ದುಬಾರಿ ಟಿಕೆಟ್ ದರ ನಿಗದಿ ಮಾಡಿವೆ.

ಕಾಂತಾರ ಚಿತ್ರದ ಬುಕ್ಕಿಂಗ್ ಆರಂಭವಾಗುತ್ತಿದ್ದಂತೆ ಸಿನಿಮಾ ಪ್ರೇಮಿಗಳು ಟಿಕೆಟ್ ಬುಕ್ಕಿಂಗ್‌ಗೆ ಮುಂದಾದ ಪರಿಣಾಮ ಕಾಂತಾರ ಬುಕ್ಕಿಂಗ್ ಟ್ರೆಂಡಿಂಗ್‌ಗೆ ಬಂದಿದ್ದು, ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ ನಿರ್ಮಾಪಕರಿಗೆ ಕೋಟ್ಯಾಂತರ ರೂಪಾಯಿ ಹರಿದು ಬಂದಿದೆ.


Share with

Leave a Reply

Your email address will not be published. Required fields are marked *