ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಕರಕುಶಲ ಕಲೆಗಳು ಎಂಬ ವಿಷಯದಲ್ಲಿ 21ನೆಯ ರಾಜ್ಯಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉದಾಹರಣೆಗೆ ಮೈಸೂರಿನ ಕರಕುಶಲ ಕಲೆ, ಮಣ್ಣು ಹಾಗೂ ಮರದ ಕುಶಲ ಕಲೆಗಳು ಹಾಗೆಯೇ ವಿವಿಧ ರಾಜ್ಯದ ಕರಕುಶಲ ಕಲೆಗಳ ಬಗ್ಗೆ ಚಿತ್ರ ಬಿಡಿಸಬಹುದಾಗಿದೆ.
20*14 ಸೆಂ.ಮೀ. ಗಾತ್ರದ ಡ್ರಾಯಿಂಗ್ ಶೀಟ್, ಸ್ಪರ್ಧಾ ಕಾರ್ಡ್ ಅಥವಾ ಅಂಚೆ ಕಾರ್ಡ್ ಮೂಲಕ ಚಿತ್ರ ಬಿಡಿಸಬಹುದು. ಸ್ಪರ್ಧೆಯು ಕರ್ನಾಟಕದವರಿಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಕಾಲೇಜು ಮತ್ತು ಸಾರ್ವಜನಿಕ ವಿಭಾಗ ಹೀಗೆ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಸಿಲಾಗುವುದು. ಜಲವರ್ಣ, ತೈಲವರ್ಣ ಅಥವಾ ಇಂಡಿಯನ್ ಇಂಕ್ ಹಾಗೂ ವಿವಿಧ ರೀತಿಯಿಂದ ಚಿತ್ರಗಳನ್ನು ರಚಿಸಬಹುದಾಗಿದೆ. ಒಬ್ಬರು ಎಷ್ಟು ಬೇಕಾದರೂ ಚಿತ್ರಗಳನ್ನು ರಚಿಸಿ ಕಳುಹಿಸಬಹುದಾಗಿದೆ. ವಿದ್ಯಾರ್ಥಿಗಳಾಗಿದ್ದಲ್ಲಿ ತಮ್ಮ ವಿಳಾಸ (ದೂರವಾಣಿ ಸಂಖ್ಯೆ ಸಹಿತ) ವಿದ್ಯಾಲಯದ ಮುದ್ರೆ ಹಾಗೂ ಶಾಲಾ ಕಾಲೇಜಿನ ಮುಖ್ಯಸ್ಥರ ಸಹಿಯೊಂದಿಗೆ ಧೃಢಿಕರಿಸಿ ಕಳುಹಿಸಬೇಕು. ಶಾಲಾ ಮುಖ್ಯಸ್ಥರ ಸಹಿ ಇರದಿದ್ದಲ್ಲಿ ಅಂತಹ ಚಿತ್ರಗಳನ್ನು ಸಾರ್ವಜನಿಕ ವಿಭಾಗಕ್ಕೆ ಪರಿಗಣಿಸಲಾಗುತ್ತದೆ.
ಸಾರ್ವಜನಿಕ ವಿಭಾಗದವರು ಕೇವಲ ಸಾರ್ವಜನಿಕ ವಿಭಾಗ ಎಂದು ಬರೆದು ಸ್ಪರ್ಧಿಯು ತನ್ನ ಪೂರ್ಣ ವಿಳಾಸ(ದೂರವಾಣಿ ಸಂಖ್ಯೆ ಸಹಿತ) ಕಳುಹಿಸುವುದು. ಸ್ಪರ್ಧಿಗಳು ಚಿತ್ರಗಳನ್ನು ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ 2024ರ ಮಾ.31ರ ಒಳಗಾಗಿ ನಿರ್ದೇಶಕರು, ಅಂಚೆ-ಕುಂಚ ವಿಭಾಗ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ -574216 ಬೆಳ್ತಂಗಡಿ ತಾಲೂಕು, ದ.ಕ. ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಯೋಜನೆಯ ನಿರ್ದೇಶಕ ಡಾ| ಐ.ಶಶಿಕಾಂತ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.