ಸಮಾಜ ಸೇವಾ ಸಂಸ್ಥೆಗಳಿಗೆ ಸರಕಾರದ ನೆರವು ಅಗತ್ಯ: ಅರುಣ್ ಪುತ್ತಿಲ

Share with

ಅ.1ರಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 542ನೆಯ ಸೇವಾ ಯೋಜನೆ ಅಂಗವಾಗಿ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ವಿತರಣಾ ಕಾರ್ಯಕ್ರಮ.

ಉಜಿರೆ: ಸಮಾಜ ಸೇವೆ ಮಾಡುವ ಸ್ವಭಾವ ಎಲ್ಲರಲ್ಲಿ ಇರುವುದಿಲ್ಲ. ಹೆಚ್ಚಿನವರು ಸ್ವಾರ್ಥ ಸಾಧಕರೆ. ಆದರೆ ಕಳೆದ 11 ವರ್ಷಗಳ ಹಿಂದೆ ನೊಂದವರ ಸೇವೆ ಮಾಡುವ ಕನಸನ್ನು ಕಂಡ ರಾಜಕೇಸರಿ ತಂಡ ದೀಪಕ್ ಜಿ ಯವರ ನೇತೃತ್ವದಲ್ಲಿ ನನಸಾಗಿ ಸಮಾಜಕ್ಕೆ ಆದರ್ಶ ಮಾದರಿಯಾಗಿದೆ. ಹತ್ತಾರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಅನಾಥರಿಗೆ ಹಾಗೂ ಬಡ ರೋಗಿಗಳಿಗೆ ಆರ್ಥಿಕ ನೆರವು, ರಕ್ತದಾನ ಶಿಬಿರ, ಅನಾಥಾಶ್ರಮಗಳಿಗೆ ನೆರವು, ಸ್ವಚ್ಚತಾ ಕಾರ್ಯಕ್ರಮದಂತಹ ನೂರಾರು ಸಮಾಜಮುಖಿ ಕಾರ್ಯಕ್ರಮಗಳಿಂದ ತಂಡ ಸಾರ್ಥಕ್ಯ ಕಂಡಿದೆ. ಇಂತಹ ಪ್ರಾಮಾಣಿಕ ಸಮಾಜ ಸೇವಾ ಸಂಸ್ಥೆಗಳಿಗೆ ಸರಕಾರ ಆದ್ಯತೆಯ ನೆಲೆಯಲ್ಲಿ ನೆರವು ನೀಡಿ ಪ್ರೋತ್ಸಾಹಿಸಬೇಕು ಮತ್ತು ದೀಪಕ್ ಜಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಹೇಳಿದರು.

ಅವರು ಅ.1ರಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 542ನೆಯ ಸೇವಾ ಯೋಜನೆ ಅಂಗವಾಗಿ ನಾನಾ ತಾಲೂಕಿನ 11 ಅಶಕ್ತ ಆಶ್ರಮಗಳಿಗೆ ಅಕ್ಕಿ ವಿತರಣೆ, 11 ಅಶಕ್ತ ಬಡ ರೋಗಿಗಳಿಗೆ ವಸ್ತ್ರ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ 11 ವಿವಿಧ ಬಗೆಯ ಹಣ್ಣು ಹಂಪಲುಗಳ ಗಿಡಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಸಮಾಜ ಸೇವಾ ಸಂಸ್ಥೆಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು. ಆ ಮೂಲಕ ಅವರ ಸೇವೆ ಇನ್ನುಳಿದ ನೊಂದವರಿಗೆ ದೊರೆಯಬೇಕು. ಸಂಘಟನೆಯ ಸಮಾಜಸೇವೆಯಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಬೆಳ್ತಂಗಡಿ ಮೋಸ್ಟ್ ಹೋಲಿ ರೆಡಿಮಿ ಚರ್ಚ್ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೊ ಮಾತನಾಡಿ ರಾಜಕೇಸರಿ ತಂಡದ ಕಾರ್ಯ ದೇವರು ಮೆಚ್ಚುವ ಕಾರ್ಯ. ಹನ್ನೊಂದು ವರ್ಷದ ಹಿಂದೆ ಈ ಸಂಘಟನೆ ಪ್ರಾರಂಭಿಸಿದ ಫಲವಾಗಿ ಇಂದು 542ನೇ ಸೇವಾ ಕಾರ್ಯ ಮಾಡುವಂತಾಗಿದೆ. ಇದು ನಿರಂತರವಾಗಿ ನಡೆಯಲಿ. ಎಲ್ಲಾ ಸದಸ್ಯರ ಪರಿಶ್ರಮಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದರು. ಬಳಂಜದ ಧರ್ಮಗುರು ಝಮೀರ್ ಸಅದಿ ಅಲ್ ಫಾಝಿಲ್, ಉಜಿರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರಾಜೇಶ್ ಕೋಟ್ಯಾನ್, ಪತ್ರಕರ್ತ ಮನೋಹರ ಬಳಂಜ, ತಾಲೂಕು ಆಸ್ಪತ್ರೆ ಕಚೇರಿಯ ವ್ಯವಸ್ಥಾಪಕ ಅಜಯ್, ಮದಿಮಯೆ ತುಳು ಚಲನಚಿತ್ರ ತಂಡದ ಬಾಲ ನಟ ಅಮನ್ ಎಸ್.ಕರ್ಕೇರ, ರಾಜಕೇಸರಿ ತಂಡದ ಸ್ಥಾಪಕಾದ್ಯಕ್ಷ ದೀಪಕ್ ಜಿ, ಜಿಲ್ಲಾದ್ಯಕ್ಷ ಅಶೋಕ್ ಪೂಜಾರಿ ಮಾಲೆಮಾರ್, ಖ್ಯಾತ ನೃತ್ಯ ಕೊರಿಯೋಗ್ರಾಫರ್ ರಾಜೇಶ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಪ್ರೇಮ್ ರಾಜ್ ರೋಷನ್ ಸಿಕ್ವೇರಾ ಸ್ವಾಗತಿಸಿ ,ಅದ್ಯಕ್ಷ ಸಂದೀಪ್ ವಂದಿಸಿದರು.ಮಹೇಶ್ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *