ಬೆಳ್ತಂಗಡಿ: ಒಳ್ಳೆಯ ಮನಸ್ಸು ಮತ್ತು ಒಳ್ಳೆ ಕೆಲಸ ಇದ್ದರೆ ಎಲ್ಲಾ ಕಾರ್ಯಗಳು ಸಿದ್ದಿಸುತ್ತವೆ. ಭಜನಾ ಪರಂಪರೆ ಮತ್ತೆ ಮುನ್ನಲೆಗೆ ಬರಬೇಕು ಎಂದು ಮಂಡ್ಯ ಜಿಲ್ಲೆಯ ಆರತಿಪುರ ಜೈನಮಠದ ಪೂಜ್ಯ ಸ್ವಸ್ತಿ ಶ್ರೀ ಸಿದ್ಧಾಂತಕೀರ್ತಿ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ 25ನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಆಡುವ ಮಾತು ಹಿತಮಿತವಾಗಿರಬೇಕು. ಮಾತು ಆಡುವವರಿಗೂ ಕೇಳುವವರಿಗೂ ಶಾಂತಿ, ಸಮಾಧಾನ ನೀಡಬೇಕು. ಮಾತೆ ಮಾಣಿಕ್ಯ, ಮಾತಿನ ಅಲಂಕಾರವೇ ಸರ್ವ ಶ್ರೇಷ್ಠವಾಗಿದೆ. ನಮ್ಮ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯಬಾರದು. ಆಧುನಿಕತೆ ಮತ್ತು ಪ್ರಗತಿಯ ಹೆಸರಿನಲ್ಲಿ ಮೂಲನಂಬಿಕೆ, ನಡವಳಿಕೆ, ಆಚಾರ-ವಿಚಾರಗಳನ್ನು ಕಡೆಗಣಿಸಬಾರದು. ಭಾರತೀಯ ಧರ್ಮ ಮತ್ತು ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟ ಸ್ಥಾನಮಾನವಿದೆ. ಗುರು ಇಲ್ಲದೆ ಗುರಿ ತಲುಪಲು ಸಾಧ್ಯವಾಗದು. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಸಿಂಹಾವಲೋಕನ ಮಾಡಿದಾಗ ಮಾತಿನ ಮಹತ್ವದ ಅರಿವಾಗುತ್ತದೆ. ಪರಿಶುದ್ಧ ಮನಸ್ಸಿನಿಂದ ಭಜನೆ ಮೂಲಕ ದೇವರ ನಾಮಸ್ಮರಣೆ ಮಾಡಿದಾಗ ಸಕಲ ಸಿದ್ಧಿಯಾಗಿ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಜಾತಿಮತ ಭೇದವಿಲ್ಲದೆ ಪ್ರತಿಪಲಾಪೇಕ್ಷೆಯಿಲ್ಲದೆ ಸಕಲ ಮಾನವ ಸಮಾಜಕ್ಕೆ ಹಾಗೂ ಪ್ರಾಣಿ-ಪಕ್ಷಿಗಳು ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವೆ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಶುಭಹಾರೈಸಿದರು.
ಹೇಮಾವತಿ ವಿ.ಹೆಗ್ಗಡೆಯವರು ಶ್ರದ್ಧಾ-ಭಕ್ತಿಯಿಂದ ಮಾಡುವ ಮುನಿಗಳ ಸೇವೆ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣ ಹಾಗೂ ಧರ್ಮ, ಸಂಸ್ಕೃತಿ, ಪರಂಪರೆಯ ಸಂರಕ್ಷಣೆ ಮತ್ತು ಅತಿಥಿ ಸತ್ಕಾರ ಸ್ತುತ್ಯಾರ್ಹವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ ಭಜನಾ ಕಮ್ಮಟದಿಂದ ದುಶ್ಚಟಗಳು ದೂರವಾಗಿ ಧರ್ಮಜಾಗೃತಿಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಭಜನಾಮಂಡಳಿಗಳ ಮೂಲಕ ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಬಿರಾರ್ಥಿಗಳು ನಿರಂತರ ಅಧ್ಯಯನ ಮತ್ತು ಅಭ್ಯಾಸದಿಂದ ತರಬೇತಿಯಲ್ಲಿ ಪಡೆದ ಅನುಭವವನ್ನು ಸದುಪಯೋಗ ಪಡಿಸಿ ಸಾತ್ವಿಕ ಜೀವನ ನಡೆಸಬೇಕು. ಭಜನೆ ಮೂಲಕ ಭಗವಂತನಿಗೆ ಭಕ್ತಿಯ ಸುಮಗಳನ್ನು ಅರ್ಪಿಸಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಭಜನಾ ತರಬೇತಿ ಪಡೆದವರು ನಾಯಕತ್ವ ಗುಣವನ್ನು ಬೆಲೆಸಿಕೊಂಡು ಆಯಾ ಊರಿನ ಪ್ರಗತಿಯ ಹರಿಕಾರರಾಗಬೇಕು ಎಂದು ಸಲಹೆ ನೀಡಿದರು. ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ್ ಮೊಯ್ಲಿ ವರದಿ ಸಾದರಪಡಿಸಿ, ಕಳೆದ 24 ವರ್ಷಗಳಲ್ಲಿ 2412 ಭಜನಾ ಮಂಡಳಿಗಳ 4551 ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದರು. ಹೇಮಾವತಿ ವಿ ಹೆಗ್ಗಡೆಯವರು ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಪುರುಷೋತ್ತಮ ಪಿ.ಕೆ. ಧನ್ಯವಾದವಿತ್ತರು. ಯೋಜನಾಧಿಕಾರಿ ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರು.