ಕಾಸರಗೋಡಿಗೆ ಕೊಂಡೊಯ್ಯುವ 400 ಕೆ.ವಿ. ವಿದ್ಯುತ್ ಲೈನ್‌ ಯೋಜನೆಗೆ ವಿರೋಧ

Share with

ಜೂನ್ 12ರಂದು ಇನ್ನಾದಲ್ಲಿ ವಿದ್ಯುತ್‌ಲೈನ್ ವಿರೋಧಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ

ಉಡುಪಿ: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮೂಲಕ ಕೇರಳದ ಕಾಸರಗೋಡಿಗೆ ಕೊಂಡೊಯ್ಯುವ 400 ಕೆ.ವಿ. ವಿದ್ಯುತ್ ಲೈನ್‌ ಯೋಜನೆಯನ್ನು ವಿರೋಧಿಸಿ ಜೂ.12ರಂದು ಬೆಳಿಗ್ಗೆ 10ಗಂಟೆಯಿಂದ ಇನ್ನಾ ಗ್ರಾಮ ಪಂಚಾಯತ್ ಬಳಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್‌ಲೈನ್ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಬಿದ್ರಿಯ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಯಾದ ವಿದ್ಯುತ್‌ನ್ನು 400 ಕೆ.ವಿ. ವಿದ್ಯುತ್ ಲೈನ್ ಮೂಲಕ ಕೇರಳಕ್ಕೆ ಕೊಂಡೊಯ್ಯುವ ಯೋಜನೆ ಇದಾಗಿದೆ. ಊರವರಿಗೆ ಯಾವುದೇ ಮಾಹಿತಿ ನೀಡದೇ, ಯೋಜನೆ ಕುರಿತಂತೆ ಯಾವುದೇ ಸಮಾಲೋಚನೆ ನಡೆಸದೇ ಈ ವಿದ್ಯುತ್ ಲೈನ್‌ ಅನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಈ ಯೋಜನೆಗಳಿಗೆ ಕೃಷಿ ಅವಲಂಬಿತ ಭೂಮಾಲಕರಿಂದ ಬಲಾತ್ಕಾರವಾಗಿ ಕಸಿದುಕೊಂಡ ಫಲವತ್ತಾದ ಭೂಮಿಯ ಉಳಿಕೆ ಭಾಗದಲ್ಲಿ ಕೃಷಿ ಮಾಡುವುದು ಬಿಡಿ, ಮಳೆಗಾಲದಲ್ಲಿ ಈ ಲೈನ್ ಹಾದುಹೋದ ಮಾರ್ಗದ ಪಕ್ಕ ನಡೆದಾಡುವುದು ಜನರು, ಪ್ರಾಣಿಪಕ್ಷಿ, ಜಾನುವಾರುಗಳಿಗೆ ಅಪಾಯಕಾರಿ ಎಂದು ಅವರು ತಿಳಿಸಿದರು.
ಇದೀಗ ಉಡುಪಿ-ಕಾಸರಗೋಡು 400ಕೆ.ವಿ. ವಿದ್ಯುತ್ ಲೈನ್ ಅಳವಡಿಕೆಗಾಗಿ ನಮ್ಮೆಲ್ಲರ ತೀವ್ರ ವಿರೋಧವಿದ್ದು, ಇದನ್ನು ಜಿಲ್ಲಾಧಿಕಾರಿ, ಶಾಸಕರು, ಸಂಸದರು, ಉಸ್ತವಾರಿ ಸಚಿವರು ಹಾಗೂ ಸರಕಾರಗಳಿಗೆ ಸತತವಾಗಿ ಮಾಡಿಕೊಂಡ ಮನವಿ, ಹಕ್ಕೊತ್ತಾಯ, ಪ್ರತಿಭಟನೆಗಳೆಲ್ಲವನ್ನೂ ಮೀರಿ ಕಂಪೆನಿ ಕಾಮಗಾರಿಯನ್ನು ಬಲಾತ್ಕಾರವಾಗಿ ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಇನ್ನಾ ಗ್ರಾಪಂ ಸದಸ್ಯ ದೀಪಕ್ ಕೋಟ್ಯಾನ್, ದಿನೇಶ್ ಕೋಟ್ಯಾನ್, ಪ್ರವೀಣ್ ಶೆಟ್ಟಿ, ಪ್ರವೀಣ್ ಕೋಟ್ಯಾನ್ ಹಾಗೂ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *