ಉಡುಪಿ: ಸಮುದ್ರ ವಿಹಾರಕ್ಕೆ ತೆರಳಿದ ಇಬ್ಬರು ಯುವಕರ ಪೈಕಿ ಓರ್ವ ಅಲೆಗಳ ರಭಸಕ್ಕೆ ಸಿಕ್ಕಿ ಕೊಚ್ಚಿಹೋದ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ ಎಂಬಲ್ಲಿ ನಡೆದಿದೆ.
ತಿಪಟೂರು ಮೂಲದ ಯೋಗೀಶ್ (23) ನೀರು ಪಾಲಾದ ಯುವಕ. ಇನ್ನೋರ್ವನನ್ನು ರಕ್ಷಣೆ ಮಾಡಲಾಗಿದೆ. ಕಡಲ ತೀರಕ್ಕೆ ತೆರಳಿದ ಇಬ್ಬರು ತಿಪಟೂರು ಮೂಲದವರಾಗಿದ್ದು, ಗುರುವಾರ ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ಮೇಹಿತನ ಆಮಂತ್ರಣದ ಮೇಲೆ ಬೀಜಾಡಿಗೆ ಆಗಮಿಸಿದ್ದರು. ನಿನ್ನೆ ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದು, ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಆತನ ಸ್ನೇಹಿತನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟರು. ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಯು.ಬಿ ನಂದಕುಮಾರ್, ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.