
ಉಡುಪಿ: ಮಳೆಗಾಲ ಶುರುವಾಯಿತು ಹೊರಾಂಗಣ ವೇದಿಕೆಯ ಯಕ್ಷಗಾನ ಪ್ರದರ್ಶನಗಳಿಗೆ ಇನ್ನು ವಿರಾಮ. ಯಕ್ಷಗಾನದಲ್ಲಿ ದೊಡ್ಡ ದೊಡ್ಡ ಮೇಳಗಳು ವರ್ಷವಿಡೀ ಪ್ರದರ್ಶನ ನೀಡುತ್ತವೆ. ಆದರೆ ಮಳೆಗಾಲ ಬಂದರೆ ಚಿಕ್ಕ ಮೇಳಗಳು ಪ್ರವಾಸ ಹೊರಡುತ್ತವೆ. ಕಲಾವಿದರು ತಮ್ಮ ಮಳೆಗಾಲದ ಸಂಪಾದನೆಗೋಸ್ಕರ ಚಿಕ್ಕ ಮೆಳಗಳನ್ನು ಕಟ್ಟಿಕೊಂಡು ಮನೆ ಮನೆ ಅಲೆಯುವುದು ದಶಕಗಳಿಂದ ಬಂದ ಪದ್ಧತಿ. ಒಂದು ಪುರುಷ ವೇಷ ಮತ್ತೊಂದು ಸ್ತ್ರೀ ವೇಷ ಜೊತೆಗೆ ಹಿಮ್ಮೆಳದವರು ಚಿಕ್ಕ ಮೇಳ ಕಟ್ಟಿಕೊಂಡು ಮನೆಗಳಿಗೆ ತೆರಳಿ ಪುರಾಣದ ಕಥಾನಕ ಒಂದನ್ನು ಪ್ರದರ್ಶಿಸುತ್ತಾರೆ. ಪ್ರತಿದಿನ ಹತ್ತಾರು ಮನೆಗಳಿಗೆ ಭೇಟಿ ನೀಡುವ ಈ ತಂಡ, ಮನೆಯವರು ಕೊಟ್ಟ ಸಂಭಾವನೆಯನ್ನು ಪಡೆದುಕೊಂಡು ಮಳೆಗಾಲದ ಜೀವನೋಪಾಯ ನಡೆಸುತ್ತಾರೆ. ಸಂಸ್ಕೃತಿಯ ಪ್ರಚಾರದ ಜೊತೆಗೆ ಕಲಾವಿದರ ಕಷ್ಟಗಳಿಗೆ ಚಿಕ್ಕ ಮೇಳಗಳು ಆಸರೆಯಾಗಿವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ತಂಡಗಳು ಮಳೆಗಾಲದಲ್ಲಿ ಚಿಕ್ಕ ಮೇಳದ ಪ್ರದರ್ಶನ ನಡೆಸುತ್ತವೆ.