ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಈಗ ಜೈಲಿನಿಂದ ಹೊರ ಬಂದಿರೋ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಂದು (ಅಕ್ಟೋಬರ್ 31) ಮಗ ವಿನೀಶ್ ಜನ್ಮದಿನ. ಈ ವಿಶೇಷ ದಿನಕ್ಕೆ ಸರಿಯಾಗಿ ಅವರು ಮನೆಗೆ ಬಂದಿದ್ದಾರೆ.
ಬಳ್ಳಾರಿಯಿಂದ ಕಾರಿನಲ್ಲಿ ಪತ್ನಿ ಜೊತೆ ಹೊಸಕೆರೆಹಳ್ಳಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಅವರನ್ನು ನೋಡಲು ಫ್ಯಾನ್ಸ್ ನೆರೆದಿದ್ದರು. ಅವರಿಂದ ತಪ್ಪಿಸಿಕೊಂಡು ದರ್ಶನ್ ಮನೆ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ದರ್ಶನ್ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.
ಮಗ ವಿನೀಶ್ಗೆ ಇಂದು ಜನ್ಮದಿನ. ಹೀಗಾಗಿ, ರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಮಗನ ಜೊತೆಯೇ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಬಳಿಕ ಊಟ ಮಾಡಿ ವಿಶ್ರಾಂತಿ ಪಡೆದಿದ್ದಾರೆ. ಹಲವು ತಿಂಗಳ ಬಳಿಕ ಬೆಡ್ನಲ್ಲಿ ಅವರು ಹಾಯಾಗಿ ನಿದ್ರಿಸಿದ್ದಾರೆ. ಈ ದಿನಕ್ಕಾಗಿ ಅವರು ಕಳೆದ ನಾಲ್ಕೂವರೆ ತಿಂಗಳಿಂದ ಕಾಯುತ್ತಿದ್ದರು.
ದರ್ಶನ್ ಅವರು ಜೈಲಿನಿಂದ ಹೊರ ಬಂದಿದ್ದು ವೈದ್ಯಕೀಯ ಚಿಕಿತ್ಸೆಗಾಗಿ. ಹೀಗಾಗಿ, ಅವರು ಆದಷ್ಟು ಬೇಗ ಆಸ್ಪತ್ರೆಗೆ ತೆರಳಬೇಕಿದೆ. ಇಂದು (ಅಕ್ಟೋಬರ್ 31) ಮಧ್ಯಾಹ್ನ ಅವರು ಆಸ್ಪತ್ರೆಗೆ ಶಿಫ್ಟ್ ಆಗೋ ಸಾಧ್ಯತೆ ಇದೆ. ಆ ಬಳಿಕ ಅವರು ವೈದ್ಯರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರು ಎಲ್ಲಿ ಬೇಕಿದ್ದರೂ ಚಿಕಿತ್ಸೆ ಪಡೆಯಲು ಅವಕಾಶ ಇದೆ.
ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲವು ಕಡೆಗಳಲ್ಲಿ ಪಟಾಕಿ ಕೂಡ ಸಿಡಿಸಲಾಗಿದೆ. ಸದ್ಯದ ಮಟ್ಟಿಗೆ ಇದು ಮಧ್ಯಂತರ ಜಾಮೀನು. ಅವರು ಆರು ವಾರಗಳ ಬಳಿಕ ಮತ್ತೆ ಜೈಲು ಸೇರಬೇಕಿದೆ. ಅಲ್ಲಿಯವರೆಗೆ ಅವರ ಆರೋಗ್ಯ ಯಾವ ರೀತಿಯಲ್ಲಿ ಚೇತರಿಕೆ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.