ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಸ್ಥಗಿತ? ಡಿಕೆ ಶಿವಕುಮಾರ್​ ಸುಳಿವು

Share with

ಬೆಂಗಳೂರು:ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದ್ದು, ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಉಚಿತ ಟಿಕೆಟ್​ ಪಡೆದು ಸಂಚರಿಸುತ್ತಿದ್ದಾರೆ. ಆದರೆ, ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು, ಶಕ್ತಿ ಯೋಜನೆ ಮುಂದುವರೆಸುವ ವಿಚಾರವಾಗಿ ಮರುಪರಿಶೀಲನೆ ನಡೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ವೋಲ್ವೋ ಬಸ್​ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಬಗ್ಗೆ ಮರುಚಿಂತನೆ ನಡೆಸುವಂತೆ ಸ್ತ್ರೀಯರಿಂದಲೇ ಒತ್ತಡವಿದೆ. ಅನೇಕ ಹೆಣ್ಣುಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವಂತಹ ಶಕ್ತಿಯಿದೆ. ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ನಮಗೆ ಉಚಿತ ಪ್ರಯಾಣ ಬೇಡವೆಂದಿದ್ದಾರೆ. ಟ್ವೀಟ್, ಇ-ಮೇಲ್ ಮೂಲಕ ಅನೇಕ ಮಹಿಳೆಯರು ತಿಳಿಸುತ್ತಿದ್ದಾರೆ ಎಂದು ತಿಳಿಸಿದರು.

ಅನುಕೂಲ ಸ್ಥಿತಿಯಲ್ಲಿರುವ ಶೇಕಡಾ 5-10ರಷ್ಟು ಹೆಣ್ಣುಮಕ್ಕಳು ಹೇಳುತ್ತಿದ್ದಾರೆ. ನಾವು ಹಣ ನೀಡಿ ಟಿಕೆಟ್ ಪಡೆಯಲು ಮುಂದಾದರೂ ತೆಗೆದುಕೊಳ್ಳುತ್ತಿಲ್ಲ. ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ನಿರ್ವಾಹಕರು ಹಣ ಪಡೆದು ಟಿಕೆಟ್ ನೀಡುತ್ತಿಲ್ಲ ಅಂತ ಮಹಿಳೆಯರು ನಮಗೆ ಹೇಳಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಈ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ಮರುಪರಿಶೀಲನೆ ಬಗ್ಗೆ ಚರ್ಚೆ ಮಾಡುತ್ತೇವೆ. ​ಇದರ ಬಗ್ಗೆ ಶೀಘ್ರದಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಸಭೆ ಮಾಡತ್ತೇವೆ. ಪ್ರತ್ಯೇಕವಾಗಿ ಸಭೆ ನಡೆಸಿ ಶಕ್ತಿ ಯೋಜನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

ಶಕ್ತಿ ಯೋಜನೆ

ಕಳೆದ ವರ್ಷ ಜೂನ್​ 11 ರಂದು ಶಕ್ತಿ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆ ಅಡಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆರಂಭದಿಂದಲೂ ಈ ಯೋಜನೆಗೆ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳಾ ಪ್ರಯಾಣಿಕರು ಬಸ್ ಪ್ರಯಾಣಕ್ಕಾಗಿ ‘ಶೂನ್ಯ ಟಿಕೆಟ್’ (ಉಚಿತ ಟಿಕೆಟ್) ಪಡೆಯಲು ಕೇಂದ್ರ ಅಥವಾ ರಾಜ್ಯ ಸರ್ಕಾರವು ನೀಡಿದ ಮಾನ್ಯ ಗುರುತಿನ ಚೀಟಿಯನ್ನು ತೋರಿಸುತ್ತಿದ್ದಾರೆ. ನಿರ್ವಾಹಕರು ಮಹಿಳಾ ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ನಂತರ ಟಿಕೆಟ್‌ಗಳನ್ನು ನೀಡುತ್ತಿದ್ದಾರೆ.

ಇನ್ನು, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸರ್ಕಾರದ ನಾಲ್ಕೂ ನಿಗಮಗಳಾದ ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಸ್​ಗಳಲ್ಲಿ ನಿಗದಿತ ಸಂಖ್ಯೆ ಪ್ರಯಾಣಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.


Share with

Leave a Reply

Your email address will not be published. Required fields are marked *