ಚಂದ್ರನ ಉಷ್ಣತೆ ತಿಳಿದು ಅಚ್ಚರಿಗೊಳಗಾದ ಇಸ್ರೋ ವಿಜ್ಞಾನಿಗಳು

Share with


ಬೆಂಗಳೂರು
: ಜಗತ್ತಿನ ಅಂತರಿಕ್ಷ ಇತಿಹಾಸದಲ್ಲೇ ಮೊದಲ ಬಾರಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಚಂದ್ರನ ದಕ್ಷಿಣ ಧ್ರುವದ ನೆಲದ ಮೇಲಿನ ಉಷ್ಣತೆಯನ್ನು ಅಳೆದಿದ್ದು, ಚಂದ್ರ ಭೂಮಿಗಿಂತಲೂ ಭಾರೀ ಬಿಸಿ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಚಂದ್ರಯಾನ-3 ನೌಕೆಯಲ್ಲಿ ಕಳುಹಿಸಿದ ವಿಕ್ರಂ ಲ್ಯಾಂಡರ್‌ನಲ್ಲಿದ್ದ ‘ಚಾಸ್ಟ್‌’ ಉಪಕರಣವು ಚಂದ್ರನ ದಕ್ಷಿಣ ಧ್ರುವದ ಮಣ್ಣಿನ ಮೇಲೆ 70 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಿದ್ದು, ಮಣ್ಣಿನ ಕೆಳಗೆ 10 ಸೆಂ.ಮೀ. ಆಳದಲ್ಲಿ -10 ಡಿಗ್ರಿ ಸೆ. ಉಷ್ಣತೆಯಿದೆ ಎಂಬ ಸಂದೇಶವನ್ನು ಕಳುಹಿಸಿದೆ. ಚಾಸ್ಟ್‌ ಉಪಕರಣ ಕಳುಹಿಸಿದ ಚಂದ್ರನ ಮಣ್ಣಿನ ಉಷ್ಣತೆಯ ಮಾಹಿತಿಯನ್ನು ಗ್ರಾಫ್‌ ಜೊತೆಗೆ ಇಸ್ರೋ ಟ್ವೀಟ್‌ ಮಾಡಿದೆ.

ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲಿಳಿದು ನಾಲ್ಕು ದಿನಗಳಾಗಿವೆ. ಅದರಲ್ಲಿದ್ದ ಚಾಸ್ಟ್‌ (ಚಂದ್ರಾಸ್‌ ಸರ್ಫೇಸ್‌ ಥರ್ಮೋಫಿಸಿಕಲ್‌ ಎಕ್ಸ್‌ಪೆರಿಮೆಂಟ್‌) ಹೆಸರಿನ ಉಪಕರಣವು ಉಷ್ಣತೆ ಅಳೆಯುವುದಕ್ಕೆಂದೇ ವಿನ್ಯಾಸಗೊಂಡಿದ್ದು, ಅದು ತನ್ನ ಕೆಲಸ ಮಾಡಲಾರಂಭಿಸಿದೆ. ಈ ಉಪಕರಣದಲ್ಲಿ 10 ಪ್ರತ್ಯೇಕ ಉಷ್ಣತಾ ಮಾಪಕ ಸೆನ್ಸರ್‌ಗಳಿವೆ. ಅವು ಚಂದ್ರನ ಮಣ್ಣಿನ ಮೇಲೆ, ಮಣ್ಣಿನಿಂದ ಕೊಂಚ ಕೆಳಗೆ ಹೀಗೆ 10 ಸೆಂ.ಮೀ. ಆಳದವರೆಗಿನ ಉಷ್ಣತೆಯನ್ನು ಅಳೆದು ಅದರ ಮಾಹಿತಿಯನ್ನು ಇಸ್ರೋಗೆ ಕಳುಹಿಸಿವೆ. ಅದರ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಮಣ್ಣಿನ ಆಳಕ್ಕೆ ಹೋದಷ್ಟೂ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಮಣ್ಣಿನ ಮೇಲ್ಮೈಗೂ, ಕೆಳಭಾಗಕ್ಕೂ ಉಷ್ಣತೆಯಲ್ಲಿ ಅಗಾಧ ವ್ಯತ್ಯಾಸವಿರುವುದು ಗೋಚರಿಸಿದೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಇಸ್ರೋ ವಿಜ್ಞಾನಿ ಬಿ.ಎಚ್‌.ಎಂ.ದಾರುಕೇಶ, ‘ನಾವೆಲ್ಲರೂ ಚಂದ್ರನ ಮೇಲ್ಮೈ ಉಷ್ಣಾಂಶ 20ರಿಂದ 30 ಡಿ.ಸೆ. ಇರಬಹುದು ಎಂದು ಊಹಿಸಿದ್ದೆವು. ಆದರೆ ಲ್ಯಾಂಡರ್‌ ಕಳುಹಿಸಿರುವ ಮಾಹಿತಿ ಅನ್ವಯ, ಚಂದ್ರನ ಮೇಲ್ಮೈ ಉಷ್ಣಾಂಶ 70 ಡಿ.ಸೆ.ವರೆಗೂ ಇರುವುದು ಪತ್ತೆಯಾಗಿದೆ. ಇದು ನಾವು ಅಂದುಕೊಂಡಿದ್ದಕ್ಕಿಂತಲೂ ಅಚ್ಚರಿಯ ಪ್ರಮಾಣದಷ್ಟುಹೆಚ್ಚಾಗಿದೆ’ ಎಂದು ಹೇಳಿದ್ದಾರೆ.

ನಾವು ಭೂಮಿಯ ನೆಲದಾಳದ ಉಷ್ಣಾಂಶ ಪರಿಶೀಲಿಸಿದರೆ, ಮೇಲ್ಮೈಗೂ ನೆಲದಾಳಕ್ಕೂ 2-3 ಡಿ.ಸೆ.ನಷ್ಟುಉಷ್ಣಾಂಶದಲ್ಲಿ ವ್ಯತ್ಯಾಸ ಕಾಣಬಹುದು. ಆದರೆ ಚಂದ್ರನಲ್ಲಿ ಈ ಪ್ರಮಾಣ 50 ಡಿ.ಸೆ.ಗೂ ಹೆಚ್ಚಿದೆ. ಇದು ಸಾಕಷ್ಟುಕುತೂಹಲಕಾರಿ ವಿಷಯ’ ಎಂದು ವಿಜ್ಞಾನಿ ದಾರುಕೇಶ್‌ ಹೇಳಿದ್ದಾರೆ.

ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಲಭಿಸಿದ ಚಂದ್ರನ ದಕ್ಷಿಣ ಧ್ರುವದ ಮೊದಲ ಉಷ್ಣತೆಯ ವಿವರ ಇದಾಗಿದೆ. ಚಾಸ್ಟ್‌ ಉಪಕರಣದಿಂದ ಇನ್ನಷ್ಟುಮಾಹಿತಿಯನ್ನು ಇಸ್ರೋ ಎದುರು ನೋಡುತ್ತಿದೆ


Share with

Leave a Reply

Your email address will not be published. Required fields are marked *