ಮಂಗಳೂರು: ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣದ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ಸಿನಿಮಾ ನಗರದ ಬಿಗ್ ಸಿನೆಮಾಸ್ ನಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ದೀಪ ಬೆಳಗಿದ ಮುಂಬಯಿ ವಿ.ಕೆ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಅವರು ಮಾತಾನಾಡಿ “ಯಾನ್ ಸೂಪರ್ ಸ್ಟಾರ್ ಸಿನಿಮಾ ಇಂದಿನ ಶುಭ ಮುಹೂರ್ತದಲ್ಲಿ ಬಿಡುಗಡೆಯಾಗಿದ್ದು, ತುಳುವರು ಈ ಸಿನಿಮಾವನ್ನು ಇಷ್ಟಪಟ್ಟು ಗೆಲ್ಲಿಸಬೇಕು. ಈ ಸಿನಿಮಾವು ಯಶಸ್ವಿ ಪ್ರದರ್ಶನವನ್ನು ಕಾಣಲಿ, ಮುಂದೆ ಕೂಡ ಈ ತಂಡ ಇನ್ನಷ್ಟು ಉತ್ತಮ ಸಿನಿಮಾವನ್ನು ಮಾಡಿ ಜನಮನ್ನಣೆ ಗಳಿಸಲಿ” ಎಂದು ಹೇಳಿದರು.
ಬಳಿಕ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು “ಈ ಸಿನಿಮಾದಲ್ಲಿ ತುಳುನಾಡಿನ ಅನೇಕ ದಿಗ್ಗಜ ಕಲಾವಿದರು ನಟಿಸಿದ್ದು, ಎಲ್ಲರೂ ಚೆನ್ನಾಗಿ ನಟನೆ ಮಾಡಿದ್ದಾರೆ. ಯಾವುದೇ ತುಳು ಸಿನಿಮಾ ಬಂದರೂ ತುಳುವರು ಸೋಲಲು ಬಿಡುವುದಿಲ್ಲ ಅನ್ನೋ ನಂಬಿಕೆ ನಮ್ಮಲ್ಲಿದೆ. ತುಳುನಾಡಿನ ದೈವ ದೇವರ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಾಣಲಿ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರು ಮಾತನಾಡಿ “ಮುಂಬೈ ತುಳುವರು ಒಳ್ಳೆಯ ಸಿನಿಮಾ ನಮ್ಮ ಮುಂದೆ ತಂದಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು.
ನಟ ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್ ಮಾತನಾಡಿ “ಮುಂಬೈಯಲ್ಲಿದ್ದ ತುಳುವರು ನಮ್ಮ ತುಳುನಾಡಿನ ಮೇಲೆ ಪ್ರೀತಿಯಿಟ್ಟು ಸಿನಿಮಾವನ್ನು ಮಾಡಿದ್ದಾರೆ. ಅವರನ್ನು ತುಳುವರು ಸೋಲಲು ಬಿಡಬಾರದು, ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ” ಎಂದರು.
ಸಮಾರಂಭದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಶಿವಧ್ವಜ್ ಶೆಟ್ಟಿ, ಜಯರಾಮ ಶೇಖ, ಅಡ್ಯಾರ್ ಮಾಧವ ನಾಯ್ಕ್, ಗಿರೀಶ ಎಂ ಶೆಟ್ಟಿ ಕಟೀಲು, ಹರೀಶ್ ವಾಸು ಶೆಟ್ಟಿ, ಮಾನಸಿ ಸುಧೀರ್, ಸಂಗೀತ ನಿರ್ದೇಶಕ ವಿ. ಮನೋಹರ್, ನವೀನ್ ಡಿ ಪಡೀಲ್, ದಯಾನಂದ ಶೆಟ್ಟಿ, ತಮ್ಮ ಲಕ್ಷಣ, ರಾಮ್ ಶೆಟ್ಟಿ ಮುಂಬೈ, ಬಾಳ ಜಗನ್ನಾಥ ಶೆಟ್ಟಿ, ಭೋಜರಾಜ್ ವಾಮಂಜೂರ್, ಮೋಹನ್ ಕೊಪ್ಪಲ ಮತ್ತಿತರರು ಉಪಸ್ಥಿತರಿದ್ದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯ ಕಲ್ಪನಾ, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್‌ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.