ಕಾಸರಗೋಡು: ವಿದೇಶದಿಂದ ಊರಿಗೆ ಹೊರಟಿದ್ದ ಬದಿಯಡ್ಕದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.
ವಿದ್ಯಾಗಿರಿ ಮುನಿಯೂರಿನ ಮುಹಮ್ಮದ್ ಸಿದ್ದೀಕ್ (28) ಎಂಬುವವರು ನಾಪತ್ತೆಯಾಗಿದ್ದು, ಅವರು ಸೆ.25 ರಂದು ಗಲ್ಪ್ ನಿಂದ ಊರಿಗೆ ತಲಪುವುದಾಗಿ ಮನೆಯವರಿಗೆ ತಿಳಿಸಿದ್ದರು. ಅಂದು ಕೋಜಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿದ್ದೀಕ್ ಮನೆಗೆ ತಲುಪಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ.
ಅಂದು ರಾತ್ರಿ ಸಿದ್ದೀಕ್ ನನ್ನು ವಿಚಾರಿಸಿ ತಂಡವೊಂದು ಮನೆಗೆ ಬಂದಿದ್ದು, ಕೋಜಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದ ನಂತರ ಯಾರಾದರೂ ಅಪಹರಿಸಿ ಇರಬಹುದೇ ಅಥವಾ ಬೇರೆ ಎಲ್ಲಿಗಾದರೂ ತೆರಳಿರಬಹುದೇ ಎಂಬ ಸಂಶಯ ಉಂಟಾಗಿದೆ. ತಂದೆ ಯೂಸಫ್ ನೀಡಿದ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.