ಮಹಾರಾಷ್ಟ್ರ: ಸೋಯಾಬಿನ್ ಸಿಪ್ಪೆಯ ಜೊತೆ ಸುಮಾರು 35 ಗ್ರಾಂ ತೂಕದ ₹2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಮ್ಮೆ ನುಂಗಿ ಬಿಟ್ಟಿದ್ದು, ಚಿನ್ನದ ಸರಕ್ಕಾಗಿ ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿದ ಘಟನೆಯೊಂದು ಮಹಾರಾಷ್ಟ್ರದ ಮಂಗ್ರುಲ್ಪಿರ್ ನಲ್ಲಿರುವ ಸರ್ಸಿ ಗ್ರಾಮದಲ್ಲಿ ನಡೆದಿದೆ.
ಸರ ಕಳೆದುಕೊಂಡ ಮಹಿಳೆ ಎಷ್ಟೇ ಹುಡುಕಾಡಿದರೂ ಸರ ಸಿಗದ ಹಿನ್ನೆಲೆಯಲ್ಲಿ ಗಂಡನಿಗೆ ತಿಳಿಸಿದ್ದು, ಆಗ ಮನೆಯಲ್ಲಿ ಎಲ್ಲರೂ ಹುಡುಕಾಡಿದ್ದಾರೆ. ನಂತರ ಸೋಯಾಬೀನ್ ಸಿಪ್ಪೆಯ ತಟ್ಟೆಯಲ್ಲಿ ಸರ ಇರಿಸಿದ್ದು, ಎಮ್ಮೆಗೆ ತರಕಾರಿ ಸಿಪ್ಪೆ ತಿನ್ನಿಸಿದ್ದು ನೆನಪಿಗೆ ಬಂದಿದೆ. ಎಮ್ಮೆಯೇ ಸರವನ್ನು ನುಂಗಿರಬೇಕು ಎಂದು ತಿಳಿದು ವೈದ್ಯರ ಬಳಿ ಎಮ್ಮೆಯನ್ನು ಕರೆದೊಯ್ದಿದ್ದಾರೆ.
ವೈದ್ಯರು ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿ ಸರ ಹೊರಗೆ ತೆಗೆಯಬೇಕು ಎಂದು ಹೇಳಿದ್ದು, ಮಾಲೀಕರ ಅನುಮತಿ ಮೇರೆಗೆ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿ ಚಿನ್ನದ ಸರವನ್ನು ಹೊರ ತೆಗೆದಿದ್ದಾರೆ. ಸದ್ಯ ಎಮ್ಮೆ ಆರೋಗ್ಯವಾಗಿದೆ ಹಾಗೂ ಚಿನ್ನದ ಸರ ಮರಳಿ ಸಿಕ್ಕಿದ್ದು ಮಾಲೀಕನಿಗೆ ಸಂತಸ ಉಂಟಾಗಿದೆ ಎಂದು ತಿಳಿದು ಬಂದಿದೆ.