ಉಡುಪಿ: ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಚಿನ್ನ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳು ಇದ್ದ ಬ್ಯಾಗ್ ಅನ್ನು ಕಳವು ಮಾಡಿದ ಕಳ್ಳನನ್ನು ಉಡುಪಿ ಠಾಣೆಯ ರೈಲ್ವೆ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ದೆಹಲಿಯ ನಿವಾಸಿ ಸನ್ನಿ ಮಲ್ಹೋತ್ರಾ ಎಂದು ಗುರುತಿಸಲಾಗಿದ್ದು, ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್ ಎಂಬ ಮಹಿಳೆ ಕರ್ತವ್ಯದಲ್ಲಿದ್ದ ಟಿಟಿ ಮೂಲಕ ಬ್ಯಾಗ್ ಕಳವಾಗಿದೆ ಎಂದು ದೂರು ನೀಡಿದ್ದು, ಕೂಡಲೇ ಆರ್‌ಪಿಎಫ್ ಉಡುಪಿಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಯಾಣಿಕರ ದೂರಿನ ಆಧಾರದ ಮೇಲೆ ಶ್ರೀಕಾಂತ್ ಅವರು ಪ್ಲಾಟ್‌ಫಾರ್ಮ್‌ನ ಕೊನೆಯಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಕುಳಿತಿರುವುದನ್ನು ಅವರು ಗಮನಿಸಿದರು. ವಿಚಾರಣೆ ನಡೆಸಿದಾಗ ಅವರು ಮಂಗಳೂರಿನಿಂದ ಮಡಗಾಂವ್ ಟಿಕೆಟ್ ಅನ್ನು ತೋರಿಸಿದರು. ವಿಚಾರಣೆ ನಡೆಸುತ್ತಿದ್ದಾಗ ಆ ವ್ಯಕ್ತಿಯು ಎಟಿಎಂ ಕಾರ್ಡ್ ಅನ್ನು ಪ್ಲಾಟ್‌ಫಾರ್ಮ್ ಪಕ್ಕದ ಪೊದೆಗಳ ಮೇಲೆ ಎಸೆದಿದ್ದಾನೆ. ವಿಚಾರಣೆ ವೇಳೆ ಶಂಕಿತ ವ್ಯಕ್ತಿಯು ಸರಿಯಾದ ಉತ್ತರವನ್ನು ನೀಡಲಿಲ್ಲ.
ನಂತರ ಎಎಸ್‌ಐ ಸುಧೀರ್ ಶೆಟ್ಟಿ ಹಾಗೂ ಸಿಬ್ಬಂದಿಯೊಂದಿಗೆ ಹೆಚ್ಚಿನ ವಿಚಾರಣೆ ನಡೆಸಿದ್ದು, ಈ ವೇಳೆ ಸನ್ನಿ ಮಲ್ಹೋತ್ರಾ ಅವರು ತೋಕೂರ್ ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ತನಿಖೆ ವೇಳೆ ಆತನ ಬಳಿ 6,75000 ಮೌಲ್ಯದ 93.17 ಗ್ರಾಂ ತೂಕದ ನಾಲ್ಕು ಚಿನ್ನದ ಸರಗಳು, 3.700 ರೂ ನಗದು ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ.
ಕಳ್ಳತನವಾದ ಬೆಲೆಬಾಳುವ ವಸ್ತುಗಳೊಂದಿಗೆ ಆರೋಪಿಯನ್ನು ಮಣಿಪಾಲ ಪೊಲೀಸರಿಗೆ ಒಪ್ಪಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.