ಈದ್‌ ಮಿಲಾದ್‌ ದಿನವೇ ಗಲಭೆಗೆ ಯತ್ನ: ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Share with

ಈದ್‌ ಮಿಲಾದ್‌ ದಿನವೇ ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನ.

ಮಂಗಳೂರು: ಈದ್‌ ಮಿಲಾದ್‌ ದಿನವೇ ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನಿಸಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್‌ 30ರಂದು ನಡೆದ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಬ್ಬದ ದಿನವೇ ಮಂಗಳೂರಿನಲ್ಲೂ ಶಾಂತಿ ಕದಡುವ ಪ್ರಯತ್ನ ನಡೆದಿದ್ದು, ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ತಪ್ಪಿದೆ.

ಪುಚ್ಚೆಮೊಗೇರು ಎಂಬಲ್ಲಿ ಗಣಪತಿ ಕಟ್ಟೆಯಲ್ಲಿ ಕಿಡಿಗೇಡಿಗಳು ಹಸಿರು ಬಾವುಟ ಇಟ್ಟಿದ್ದು, ಈ ಬಗ್ಗೆ ಹೊಸಬೆಟ್ಟು ಪಿಡಿಒ ಶೇಖರ್​ ಅವರ ಗಮನಕ್ಕೆ ತಂದಿದ್ದರೂ ಬಾವುಟವನ್ನು ತೆರವು ಮಾಡದೆ ಬೇಜವಾಬ್ದಾರಿ ಮೆರೆದಿದ್ದರು ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ಇನ್ಸ್‌ಪೆಕ್ಟರ್ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಪಿಡಿಒ ಶೇಖರ್‌ ಎನ್ನುವವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹಸಿರು ಬಾವುಟ ಇಟ್ಟಿದ್ದ ಸ್ಥಳಕ್ಕೆ ಆಗಮಿಸಿದ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅವರು ‘ಇದರ ಮೇಲೆ‌ ಬಾವುಟ ಹಾಕಲಿಕ್ಕೆ ಪರ್ಮಿಶನ್ ತೆಗೊಂಡಿದಾರಾ?’ ಅಂತ ಪಿಡಿಓ ವಿರುದ್ದ ಕೆಂಡಮಂಡಲರಾಗಿದ್ದಾರೆ. ‘ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನ್ ಮಾಡ್ತಾ ಇದೀಯಾ’ ‘ಅವರು ಪರ್ಮಿಷನ್ ತೆಗೊಂಡಿಲ್ಲ, ಅಂದ್ರೆ ಪೊಲೀಸ್ ಕಂಪ್ಲೆಟ್ ಕೊಡಬೇಕು’ ಹೇಳಿದಲ್ಲದೇ ‘ಮೊದಲು ಇವನನ್ನೇ ಆರೋಪಿ‌ ಮಾಡಬೇಕು, ‘ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ’ ‘ಸಂಬಂಧ ಇಲ್ಲ ಅಂತ ಹೇಳೋ ನೀನ್ಯಾಕೆ ಪಿಡಿಓ ಆಗಿದ್ದಿ’ ಅಂತ ಇನ್ಸ್‌ಪೆಕ್ಟರ್ ಗರಂ ಆಗಿದ್ದಾರೆ.

ಬಳಿಕ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ಪೊಲೀಸ್ ಸಿಬ್ಬಂದಿ ಮೂಲಕ ​ ಬಾವುಟ ತೆರವು ಮಾಡಿಸಿದ್ದು, ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.


Share with

Leave a Reply

Your email address will not be published. Required fields are marked *