ಪುತ್ತೂರು: ಝೀ ಕನ್ನಡ ವಾಹಿನಿಯು ನಡೆಸುವ ‘ಸರಿಗಮಪ’ ಸೀಸನ್ -20 ಸಂಗೀತ ಸ್ಪರ್ಧೆಯ ಮೆಗಾ ಅಡಿಷನ್ ನಲ್ಲಿ ಪುತ್ತೂರಿನ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ ಮತ್ತು ಸವಿತಾ ಎ. ರೈ ದಂಪತಿಯ ಪುತ್ರಿ ಸಮನ್ವಿ ರೈ ಮದಕ ಅವರು ಆಯ್ಕೆಯಾಗಿದ್ದಾರೆ.
ರಾಜ್ಯದ ಪ್ರಮುಖ ವಾಹಿನಿಯಾದ ಝೀ ಕನ್ನಡ ನಡೆಸುವ ಸರಿಗಮಪ ಕಾರ್ಯಕ್ರಮದ ಅಡಿಷನ್ ನಲ್ಲಿ ದೇಶ-ವಿದೇಶಗಳಿಂದ ಲಕ್ಷಕ್ಕೂ ಮಿಕ್ಕಿ ಸ್ಪರ್ಧಿಗಳ ಪೈಕಿ ಮೆಗಾ ಅಡಿಷನ್ ಗೆ 40 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ಅಂತಿಮ ಸ್ಪರ್ಧೆಗೆ 20 ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ಅದರಲ್ಲಿ ಸಮನ್ವಿ ರೈಯವರು ಓರ್ವರಾಗಿದ್ದು ಹೆಮ್ಮೆಯ ವಿಷಯವಾಗಿದೆ. ಮೆಗಾ ಅಡಿಷನ್ ನ ಎಪಿಸೋಡ್ ಅ.7 ರಂದು ಪ್ರಾರಂಭವಾಗಲಿದ್ದು ರಾತ್ರಿ 7.30 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಸಮನ್ದಿ ರೈಯವರು ವಿದ್ವಾನ್ ದಿ.ಕಾಂಚನ ನಾರಾಯಣ ಭಟ್ ಮತ್ತು ವಿದುಷಿ ವೀಣಾ ರಾಘವೇಂದ್ರ ಅವರಿಂದ ಸಂಗೀತ ತರಬೇತಿಯನ್ನು ಪಡೆದಿದ್ದು, ಖ್ಯಾತ ಸಂಗೀತ ಗಾಯಕ ಪುತ್ತೂರು ಜಗದೀಶ್ ಆಚಾರ್ಯರವರ ಸಂಗೀತ ತಂಡದ ಕಲಾವಿದೆಯಾಗಿದ್ದಾರೆ.