ಮಂಗಳೂರು: ದಸರಾ ಸಂಭ್ರಮ ಹಾಗೂ ನವರಾತ್ರಿ ಸಡಗರದ ಹಿನ್ನೆಲೆಯಲ್ಲಿ ಶಾಲೆಗಳಿಗೆ ದಸರಾ ರಜೆ ಈಗಾಗಲೇ ಘೋಷಣೆಯಾಗಿದೆ. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ದಸರಾ ರಜೆ ಇನ್ನೂ ಅಂತಿಮವಾಗಿಲ್ಲ. ಅದರಿಂದ ಶಾಸಕ ವೇದವ್ಯಾಸ ಕಾಮತ್ ಅವರು ಈ ಬಗ್ಗೆ ಸರಕಾರದ ಗಮನಸೆಳೆದಿದ್ದು, ‘ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಸಂಬಂಧಪಟ್ಟವರನ್ನು ಆಗ್ರಹಿಸುವಂತೆ ಹಲವಾರು ಪೋಷಕರು ಈಗಾಗಲೇ ಮನವಿ ಮಾಡಿದ್ದಾರೆ. ದಸರಾ ನಾಡಿನ ಅತ್ಯಂತ ಪ್ರಮುಖ ಹಬ್ಬವಾಗಿದ್ದು ಮಂಗಳೂರು ದಸರಾವು ಮೈಸೂರಿನ ಅನಂತರ ಅತ್ಯಂತ ಜನಾಕರ್ಷಣೆಗಳಿಸಿದೆ. ಹೀಗಾಗಿ ನವರಾತ್ರಿಯನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸೇರಿದಂತೆ ಎಲ್ಲರೂ ಸಂಭ್ರಮದಿಂದ ಆಚರಿಸುವಂತಾಗಲು ರಜೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅ.9ರಿಂದ 24ರ ವರೆಗೆ ದಸರಾ ರಜೆಯನ್ನು ನೀಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದಲೇ ಈ ನಿಯಮ ಮಾಡಿದ್ದು, ಹೆಚ್ಚಿನ ಕಡೆ ಇದನ್ನೇ ಅನ್ವಯ ಮಾಡಲಾಗಿದೆ. ಅಲ್ಪಸಂಖ್ಯಾತ ಶಾಲೆಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚುವರಿ ರಜೆ ನೀಡುವುದರಿಂದ ರಜೆ ನೀಡುವ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.
ಪಿಯು ಕಾಲೇಜುಗಳಿಗೂ ಅ.14ರಿಂದ 29ರ ವರೆಗೆ ಸಾರ್ವತ್ರಿಕ ದಸರಾ ರಜೆಯನ್ನು ನೀಡಲಾಗಿದೆ. ಬಹುತೇಕ ಪಿಯು ಕಾಲೇಜುಗಳಲ್ಲಿ ಇದೇ ನಿಯಮವನ್ನು ಅಳವಡಿಸಿಕೊಂಡಿದ್ದಾರೆ.