ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಎಂಬಲ್ಲಿ ನಾಗರ ಹಾವಿಗೆ ಡೀಸೆಲ್ ಎರಚಿ ವಿಕೃತಿ ಮೆರೆದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕಿನ್ನಿಗೋಳಿ ಎಂಬಲ್ಲಿ ಬಹುಮಹಡಿ ಕಟ್ಟಡದ ಪಕ್ಕದಲ್ಲಿ ನಾಗರ ಹಾವನ್ನು ಕಂಡ ಕಟ್ಟಡದ ಕಾವಲುಗಾರ ಹಾವಿನ ಮೇಲೆ ಡೀಸೆಲ್ ಎರಚಿದ್ದು, ಕೂಡಲೇ ನಾಗರಹಾವು ಮೈ ಉರಿಯಿಂದ ಒದ್ದಾಡುತ್ತಿರುವುದು ಕಂಡ ಸ್ಥಳೀಯರು ಉರಗ ತಜ್ಞ ಯತೀಶ್ ಕಟೀಲು ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಯತೀಶ್ ಕಟೀಲು ಅವರು ಶಾಂಪೂ ಹಾಕಿ ತೊಳೆದು ಹಾವು ಸಹಜ ಸ್ಥಿತಿಗೆ ಮರಳಿದ ನಂತರ ಕಾಡಿಗೆ ಬಿಟ್ಟಿದ್ದಾರೆ. ಆದರೆ ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾರ್ಮಿಕ ಕೂಡಾ ನಾಗರಹಾವಿನಂತೆ ಮೈ ಉರಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.