ಮಂಜೇಶ್ವರ: ಮಂಜೇಶ್ವರ ಬಳಿಯ ಕಣ್ವತೀರ್ಥ ಸಮುದ್ರ ತೀರದ ಖಾಸಗಿ ಶೆಡ್ ನಲ್ಲಿ ತಿಮಿಂಗಿಲದ ಅಸ್ತಿಪಂಜರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 2007ರಲ್ಲಿ ಮಂಜೇಶ್ವರ ಸಮುದ್ರ ಕಿನಾರೆಗೆ ಬೃಹತ್ ಗಾತ್ರದ ತಿಮಿಂಗಿಲದ ಅಸ್ತಿ ಪಂಜರ ತೇಲಿ ಬಂದಿತ್ತು. ಅದನ್ನು ಕರ್ನಾಟಕ ನಿವಾಸಿಯ ಖಾಸಗಿ ವ್ಯಕ್ತಿಯ ಶೆಡ್ ನಲ್ಲಿ ತೆಗೆದಿರಿಸಲಾಗಿದೆ ಎಂದು ಅರಣ್ಯ ಇಲಾಖೆಯವರ ಪ್ರಾರ್ಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಶೆಡ್ ಸುಮಾರು 10 ಎಕರೆ ತೆಂಗಿನ ತೋಟದಿಂದ ಕೂಡಿದ್ದು, ಇಲ್ಲಿ ಕಾರ್ಮಿಕರು ಮಾತ್ರವೇ ವಾಸಿಸುತ್ತಿದ್ದಾರೆ. ಇದೀಗ ಇಲ್ಲಿ ತಿಮಿಂಗಿಲದ ಅಸ್ತಿ ಪಂಜರ ಪತ್ತೆಯಾಗಿದೆ. ಆದರೆ ತಿಮಿಂಗಿಲದ ಅಸ್ತಿ ಪಂಜರವನ್ನು ಬಚ್ಚಿಡುವುದು ವನ್ಯ ಜೀವಿ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದೆ ಈ ಅಸ್ತಿ ಪಂಜರವನ್ನು ಡಿ.ಎನ್. ಎ ಪರೀಕ್ಷೆಗೆ ಒಳಪಡಿಸಿ ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಕಾಸರಗೋಡು ರೇಂಜ್ ನ ಅರಣ್ಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.