ಕೋಲಾರ: ಕೋಲಾರದ ಕೆಜಿಎಫ್ ತಾಲೂಕಿನ ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕಾಗಿ ವಿದ್ಯಾರ್ಥಿನಿಯ ಕೈಯನ್ನು ಮುರಿದ ಘಟನೆ ನಡೆದಿದೆ. ಮುಖ್ಯ ಶಿಕ್ಷಕಿಯು ವಿದ್ಯಾರ್ಥಿನಿಯನ್ನು ಥಳಿಸಿ ಎಡ ಕೈ ಮುರಿದಿದ್ದು, ಈ ಸಂಬಂಧ ಪೋಷಕರು ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ಸಲ್ಲಿಸಿದ್ದು, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕೂಡ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಡಿಡಿಪಿಐ ಕೃಷ್ಣಮೂರ್ತಿಯವರು ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದ್ದು, ಬಾಲಕಿಯ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಮುಖ್ಯ ಶಿಕ್ಷಕಿಯೇ ಭರಿಸಬೇಕೆಂದು ಸೂಚಿಸಲಾಗಿದೆ.
ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಲು ಶಿಕ್ಷಣಾಧಿಕಾರಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಹೇಮಲತಾ ಅವರನ್ನು ವರ್ಗಾವಣೆ ಮಾಡುವಂತೆ ಪೋಷಕರು ಪಟ್ಟು ಹಿಡಿದಿದ್ದರು. ಈ ವೇಳೆ ಶಿಕ್ಷಣಾಧಿಕಾರಿ ಅವರು ಶಾಲಾ ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದು, ಹಾಗಾಗಿ ಇದೀಗ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಡಿಡಿಪಿಐ ಅವರು ಆದೇಶವನ್ನು ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.