
ಮಂಗಳೂರು: ಇತ್ತೀಚೆಗೆ ಮದುವೆಯಾಗಿದ್ದ ಮಹಿಳೆಯೊಬ್ಬರು ಪುಣೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ವರದಿಯಾಗಿದೆ. ಸುಜಾತ ಶೆಟ್ಟಿ ಮೃತ ಮಹಿಳೆಯಾಗಿದ್ದು ಉಳ್ಳಾಲ ತೌಡುಗೋಳಿ ನಿವಾಸಿಯಾದ ಇವರು ಪುಣೆಯಲ್ಲಿ ನೆಲೆಸಿದ್ದರು.
ಸುಜಾತ ಶೆಟ್ಟಿ ಇವರನ್ನು ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿದ್ದು, ಅ.8ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಾಸ್ಪದವಾಗಿ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಶವವನ್ನು ಮಹಜರಿಗೆ ಕಳುಹಿಸಿ ಕೊಡಲಾಗಿತ್ತು. ಅ.9ರಂದು ಅಂತಿಮ ಸಂಸ್ಕಾರ ನಡೆದಿದ್ದು, ಮನೆ ಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಶವ ಮಹಜರು ವರದಿ ಬಂದ ನಂತರ ಪ್ರಕರಣದ ಕುರಿತು ಸತ್ಯಾಸತ್ಯತೆ ತಿಳಿದು ಬರಲಿದೆ.