ಅಭಿನಯ ಸರಸ್ವತಿ ಬಿ. ಸರೋಜಾದೇವಿ ಹೆಸರಲ್ಲಿ ಹೊಸ ಪ್ರಶಸ್ತಿ ಸ್ಥಾಪಿಸಿದ ಸರ್ಕಾರ

Share with

ನಟಿ ಬಿ. ಸರೋಜಾದೇವಿ (B Saroja Devi) ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಅವರ ನಿಧನದ ನಂತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಯಿತು. ಅದರ ಬೆನ್ನಲ್ಲೇ ಇನ್ನೊಂದು ಸಿಹಿ ಸುದ್ದಿ ನೀಡಲಾಗಿದೆ. ‘ಅಭಿನಯ ಸರಸ್ವತಿ ಬಿ. ಸರೋಜಾದೇವಿ’ (Abhinaya Saraswathi B Saroja Devi Award) ಹೆಸರಿನಲ್ಲಿ ಹೊಸ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಸ್ಥಾಪಿಸಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಹಿಳಾ ಸಾಧಕಿಯರಿಗೆ ಈ ಪ್ರಶಸ್ತಿ ಸಿಗಲಿದೆ. ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಈ ಗೌರವವನ್ನು ನೀಡಲಿರುವುದು ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಸಂತಸ ತಂದಿದೆ.

‘ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ವಿಜೇತೆ ಬಿ. ಸರೋಜಾದೇವಿ ಅವರು ಪಂಚಭಾಷಾ ತಾರೆಯಾಗಿದ್ದು, ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಸ್ತುತ ಜಾರಿಯಲ್ಲಿ ಇರುವ ಕನ್ನಡ ಚಲನಚಿತ್ರ ನೀತಿ 2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ 1ರ ಅಡಿ 2025ನೇ ಕ್ಯಾಲೆಂಡರ್ ವರ್ಷದಿಂದ ಜಾರಿಗೆ ಬರುವಂತೆ ಹೊಸದಾಗಿ ಅಭಿನಯ ಸರಸ್ವತಿ ಬಿ. ಸರೋಜಾದೇವಿ ಪ್ರಶಸ್ತಿಯನ್ನು ಸ್ಥಾಪಿಸಿ ಆದೇಶಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಕನ್ನಡ ಚಿತ್ರರಂಗದಲ್ಲಿ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರಿಗೆ ‘ಅಭಿನಯ ಸರಸ್ವತಿ ಬಿ. ಸರೋಜಾದೇವಿ’ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿರುತ್ತದೆ’ ಎಂದು ರಾಜ್ಯ ಸರ್ಕಾರದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.


Share with

Leave a Reply

Your email address will not be published. Required fields are marked *