ಮಂಗಳೂರು: ಅಕ್ಟೋಬರ್ 31ರಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮತ್ತು ನಿರ್ವಹಣೆವು ಪ್ರತಿಷ್ಠಿತ ಕಂಪನಿ ಅದಾನಿ ಗ್ರೂಪ್ ಗೆ ಸೇರಲಿದೆ.
2020ರ ಅಕ್ಟೋಬರ್ 31ರಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ವಶಕ್ಕೆ ಪಡೆದುಕೊಂಡಿತು. ನಂತರ ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಹಾಗೂ ತ್ರಿವೆಂಡ್ರಂ ವಿಮಾನ ನಿಲ್ದಾಣಗಳನ್ನು ಅದಾನಿ ತೆಕ್ಕೆಗೆ ತೆಗೆದುಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣವನ್ನು 2020ರ ಜುಲೈನಲ್ಲಿ ಅದಾನಿ ಕಂಪನಿಯು ಜಿವಿಕೆ ಕೈನಿಂದ ತೆಗೆದುಕೊಂಡಿತ್ತು.
ಆಗಿನ ಒಪ್ಪಂದದ ಪ್ರಕಾರ ಮೂರು ವರ್ಷಗಳವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅರ್ಧದಷ್ಟು ಸಿಬ್ಬಂದಿ ಹಾಗೂ ಅದಾನಿ ಸಿಬ್ಬಂದಿ ಜೊತೆಯಾಗಿಯೇ ಕೆಲಸ ಮಾಡಬೇಕಿತ್ತು. ಇದೀಗ ಒಪ್ಪಂದದ ಅವಧಿ ಅಕ್ಟೋಬರ್ 30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ಇಡೀ ವಿಮಾನ ನಿಲ್ದಾಣದ ಆಡಳಿತ ಅದಾನಿ ಗ್ರೂಪಿಗೆ ಸೇರಲಿದೆ.
ಈ ಕಾರಣದಿಂದ ವಿಮಾನ ನಿಲ್ದಾಣದ ಹಣಕಾಸು, ಎಚ್‌ಆರ್, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್ ವಿಭಾಗ ಅ.31ರ ಬಳಿಕ ಅದಾನಿ ಆಡಳಿತಕ್ಕೆ ಒಳಪಡಲಿದೆ. ಏರ್‌ಟ್ರಾಫಿಕ್ ಕಂಟ್ರೋಲ್ , ಕಾರ್ಗೊ ಹಾಗೂ ಸಿಎನ್‌ಎಸ್ ಮಾತ್ರ ಎಎಐ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ.