ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಒಡ್ಡೂರು ಫಾರ್ಮ್ಸ್ ನಲ್ಲಿ ನಿರ್ಮಾಣಗೊಂಡ ಬಯೋ ಸಿ.ಎನ್.ಜಿ. ಉತ್ಪಾದನೆ ಮಾಡುವ ಒಡ್ಡೂರು ಎನರ್ಜಿಯನ್ನು ಶುಕ್ರವಾರ ಸಂಜೆ ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು.
ಬಯೋ ಗ್ಯಾಸ್ ಉತ್ಪಾದನೆ, ಗೊಬ್ಬರ ಉತ್ಪಾದನೆಗೆ ಸಬ್ಸಿಡಿ, ಸವಲತ್ತು ನೀಡಲಾಗುವುದು, ಅವುಗಳನ್ನು ಬ್ರಾಂಡಿಂಗ್ ಮಾಡುವ ಕಾರ್ಯಕ್ಕೆ ಕೇಂದ್ರ ಪ್ರೋತ್ಸಾಹ ನೀಡುತ್ತದೆ ಎಂದರು.
ದೇಶದಲ್ಲಿ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು 2030ರೊಳಗೆ ಉತ್ಪಾದನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಸವಾಲುಗಳನ್ನು ಸ್ವೀಕರಿಸುವ ಮೂಲಕ ಶಾಸಕ ರಾಜೇಶ್ ನಾಯ್ಕ್ ಅವರು ಬಯೋ ಸಿ.ಎನ್.ಜಿ. ಘಟಕ ಆರಂಭಿಸಿದ್ದು ಮಾದರಿಯಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸರಕಾರಗಳಿಗೆ ಪ್ರೇರಣೆ ನೀಡುವ ಕಾರ್ಯವನ್ನು ಶಾಸಕರು ತನ್ನ ಜಾಗದಲ್ಲಿ ಮಾಡಿದ್ದಾರೆ. ಪ್ರಕೃತಿಗೆ ಪೂರಕವಾದ ಮಾದರಿ ಘಟಕ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಮಾತನಾಡಿ, ಬಿಸಾಡುವಂತಹ ವಸ್ತುಗಳನ್ನು ಜೋಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು. ಮಂಗಳೂರು ಉತ್ತರ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಾಲುದಾರ ಉನ್ನತ್ ನಾಯ್ಕ್ ಉಪಸ್ಥಿತರಿದ್ದರು. ಪ್ರಶಾಂತ್ ಲಕ್ಷ್ಮಣ ದೇವಾಡಿಗ ಘಟಕದ ಕುರಿತು ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ, ಒಡ್ಡೂರು ಫಾರ್ಮ್ಸ್ ಮಾಲೀಕ ರಾಜೇಶ್ ನಾಯ್ಕ್ ಸ್ವಾಗತಿಸಿ, ಘಟಕ ನಿರ್ಮಾಣಕ್ಕೆ ಕಾರಣಗಳನ್ನು ತಿಳಿಸಿ, ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿಗೆಂದು ಆರಂಭಿಸಿದ ಈ ಪರಿಕಲ್ಪನೆ ಸುತ್ತಮುತ್ತಲಿನ ಊರುಗಳ ತ್ಯಾಜ್ಯಗಳನ್ನು ಪಡೆದುಕೊಂಡ ಸಿ.ಎನ್.ಜಿ. ಉತ್ಪಾದನೆವರೆಗೆ ತಲುಪಿದೆ ಎಂದು ಹೇಳಿದರು.
ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಆಡಳಿತ ಪಾಲುದಾರ ಉನ್ನತ್ ಆರ್. ನಾಯ್ಕ್ ವಂದಿಸಿದರು.