ಬಂಟ್ವಾಳ : ರೈಲು ಡಿಕ್ಕಿಯಾಗಿ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ಬಿ.ಸಿ ರೋಡು ಸಮೀಪದ ಮಾರ್ನಬೈಲು ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮೂಲತಃ ಮಡಂತ್ಯಾರು ಪಣಕಜೆ ನಿವಾಸಿ, ಪ್ರಸ್ತುತ ಸಜೀಪಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಮಾರ್ನಬೈಲು ದಾಸರ ಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹರಿಶ್ಚಂದ್ರ (37) ಎಂದು ಗುರುತಿಸಲಾಗಿದೆ.
ಕೂಲಿ ಕಾರ್ಮಿಕನಾಗಿರುವ ಹರಿಶ್ಚಂದ್ರ ಅವರು ಇಂದು ಬೆಳಿಗ್ಗೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ರೈಲ್ವೆ ಹಳಿಯನ್ನು ದಾಟುವ ಉದ್ದೇಶದಿಂದ ನಿಂತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿರಬಹುದು ಎನ್ನಲಾಗಿದೆ. ರೈಲು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಹರಿಶ್ಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಡಿಕ್ಕಿಯಾದ ಕೂಡಲೇ ರೈಲ್ವೆ ಇಲಾಖೆಯ ಹಳಿಯ ಕಾಮಗಾರಿ ನೋಡಿಕೊಳ್ಳುವ ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು, ಅವರು ಮಂಗಳೂರು ರೈಲ್ವೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೋಲೀಸ್ ಇಲಾಖೆಯ ಎ.ಎಸ್.ಐ ಜಾನ್ ಕೊರಿಯ ಕೋಸ್ ಅವರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯ ಮಾಹಿತಿ ಸಿಕ್ಕಿದಂತೆ ಹೊಯ್ಸಳ 112 ವಾಹನದ ಜೊತೆ ಎ.ಎಸ್.ಐ ದೇವಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.