ಉಡುಪಿ: ನೀರಿನ ಟ್ಯಾಂಕ್ ಕುಸಿದುಬಿದ್ದು ಬೆಳ್ಮಣ್ ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀಲತಾ(50) ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಮಗಳು ಪೂಜಾ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ಜ.30ರಂದು ರಾತ್ರಿ 10:30ಕ್ಕೆ ನಡೆದಿದೆ.
ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಶ್ರೀಲತಾ ಹಾಗೂ ಅವರ ಮಗಳು ಪೂಜಾ ಹೋಗಿದ್ದರು. ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿ, ಊಟ ಮಾಡಿದ ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್‌ನ ಬಳಿ ಇಡಲು ಹೋದಾಗ ನೀರುತುಂಬಿದ್ದ ಟ್ಯಾಂಕ್ (ತೊಟ್ಟಿ) ಅಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾ ಇವರ ಮೈಮೇಲೆ ಬಿದ್ದಿದೆ. ಇದರಿಂದ ಶ್ರೀಲತಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತ ಶ್ರೀಲತಾ ಅವರು ಒಂದು ಅವಧಿಗೆ ಬೆಳ್ಮಣ್ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು