ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಸೆಪ್ಟೆಂಬರ್ 26ರಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಸಂಘವು ಬೆಂಗಳೂರು ಬಂದ್‌ಗೆ ಕರೆ ನೀಡಿದೆ.
ಕುರುಬೂರು ಶಾಂತಕುಮಾರ್ ನೇತೃತ್ವದ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಭೆ ನಡೆಸಿದ ಬಳಿಕ ನಿರ್ಧಾರವನ್ನು ಪ್ರಕಟಿಸಿದ್ದು, ಬೆಂಗಳೂರು ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬಂದ್‌ಗೆ ಕರೆಯನ್ನು ನೀಡಲಾಗಿದೆ. ಸೆ.26 ರಂದು ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ರ‍್ಯಾಲಿ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಮ್ ಆದ್ಮಿ ಪಕ್ಷ, ಕನ್ನಡ ಚಳುವಳಿ ಕೇಂದ್ರ ಸಮಿತಿ, ಜಯ ಕರ್ನಾಟಕ ಸಂಘಟನೆ, ತಲಕಾಡು ಸಂಶೋಧಕರ ಸಂಘ, ರಾಷ್ಟ್ರೀಯ ಚಾಲಕರ ಒಕ್ಕೂಟ, ಕನ್ನಡ ಪರ ಹೋರಾಟಗಾರರ ಸಂಘ, ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಮಿಳು ಸಂಘ, ಕೆಂಪೇಗೌಡ ಸಮಿತಿ, ರಾಜಸ್ಥಾನಿ ಭಾಷಿಕರ ಸಂಘ, ಕರ್ನಾಟಕ ರಕ್ಷಣಾ ಸೇನೆ ಸೇರಿದಂತೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್‌ಗೆ ಬೆಂಬಲವನ್ನು ಸೂಚಿಸಿವೆ.
ಕೈಗಾರಿಕೆಗಳು, ಐಟಿ ಕಂಪನಿಗಳು, ಕಾರ್ಮಿಕರು, ಕೈಗಾರಿಕೋದ್ಯಮಿಗಳು, ಸಾರ್ವಜನಿಕರು, ಶಾಲಾ, ಕಾಲೇಜುಗಳ ಮುಖ್ಯಸ್ಥರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ನೀಡಿ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲಿಸುಂತೆ ಸಂಘಟನೆಗಳು ಮನವಿ ಮಾಡಿದ್ದೇವೆ. ಅಲ್ಲದೇ ತುರ್ತಾಗಿ ವಿಶೇಷ ವಿಧಾನ ಮಂಡಲ ಅಧಿವೇಶನ ಕರೆಯಬೇಕು. ಕಾವೇರಿ ವಿಚಾರವಾಗಿ ಸಂಕಷ್ಟ ಸೂತ್ರದ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿವೆ.