ಕಾಸರಗೋಡು: ಯುವತಿಯೊಬ್ಬಳಿಗೆ ವಿವಾಹ ಭರವಸೆ ನೀಡಿ ಕಿರುಕುಳ ನೀಡಿದ ಬಗ್ಗೆ ದಾಖಲಾದ ದೂರಿನಂತೆ ಬಿಗ್ ಬಾಸ್ ಸ್ಪರ್ಧಿ ಶಿಯಾಝ್ ಕರೀಂ (34)ನನ್ನು ಕಾಸರಗೋಡು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಿಯಾಝ್ ನನ್ನು ಕಾಸರಗೋಡು ಪೊಲೀಸರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಶಿಯಾಝ್ ವಿರುದ್ಧ ಕಾಸರಗೋಡು ಪಡನ್ನದ 32 ರ ಹರೆಯದ ಯುವತಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಶಿಯಾಝ್ ಬಿಗ್ ಬಾಸ್ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಂಡಿದ್ದರು. ಎರ್ನಾಕುಲಂ ನ ಜಿಮ್ ವೊಂದರಲ್ಲಿ ಕೆಲಸಕ್ಕಿದ್ದ ಯುವತಿಗೆ ವಿವಾಹವಾಗುವ ಭರವಸೆ ನೀಡಿ ಹಲವು ಕಡೆಗಳಿಗೆ ಕರೆದೊಯ್ದು ಕಿರುಕುಳ ನೀಡಿರುವುದಲ್ಲದೇ ಸುಮಾರು 11 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ನಡುವೆ ಬೇರೆ ಯುವತಿಯ ಜೊತೆ ವಿವಾಹ ನಿಶ್ಚಯ ಕುರಿತು ಶಿಯಾಝ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ವಿವಾಹ ಭರವಸೆ ನೀಡಿ ತನ್ನನ್ನು ವಂಚಿಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.