ನವರಾತ್ರಿಯ ಎರಡನೇ ದಿನ ಅಂದರೆ ಅಕ್ಟೋಬರ್ 4 ರಂದು ಬ್ರಹ್ಮಚಾರಿಣಿಯನ್ನು ಆರಾಧಿಸಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ವ್ಯಕ್ತಿಯಲ್ಲಿ ತಪಸ್ಸು, ತ್ಯಾಗ, ಪರಿತ್ಯಾಗ, ನೈತಿಕತೆ ಮತ್ತು ಸಂಯಮ ಹೆಚ್ಚಾಗುತ್ತದೆ. ಹಾಗಾದರೆ ಬ್ರಹ್ಮಚಾರಿಣಿಯ ಪೂಜಾ ವಿಧಾನ, ಮಂತ್ರ ಮತ್ತು ಅರ್ಪಣೆ ಹೇಗೆ?
ಬ್ರಹ್ಮಚಾರಿಣಿ ಯಾರು?
ಬ್ರಹ್ಮಚಾರಿಣಿ ಪಾರ್ವತಿ ದೇವಿಯ ಎರಡನೇ ಅವತಾರ. ಬ್ರಹ್ಮಚಾರಿಣಿ ಅಂದರೆ ಮದುವೆಯಾಗದ ಯುವತಿ.
ದಕ್ಷಮಹಾರಾಜನ ಮಗಳಾದ ಸತೀ ದೇವಿ ಯಜ್ಞದ ಬೆಂಕಿಗೆ ಆಹುತಿಯಾದ ನಂತರ, ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಪಾರ್ವತಿಯಾಗಿ ಜನಿಸುತ್ತಾಳೆ. ಈ ಜನ್ಮದಲ್ಲೂ ಶಿವನನ್ನೇ ಮದುವೆಯಾಗಲು ಬಯಸಿದ ಪಾರ್ವತಿಯು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಮಾಡಲಾರಂಭಿಸುತ್ತಾಳೆ. ಸಾವಿರಾರು ವರ್ಷಗಳವರೆಗೂ ಹಣ್ಣು ಮತ್ತು ಹೂವುಗಳನ್ನು ಹಾಗೂ ಎಲೆಗಳನ್ನು ಸೇವಿಸುತ್ತಾಳೆ.
ಆಕಾಶವನ್ನು ಹೊದಿಕೆಯಾಗಿ ಭೂಮಿಯನ್ನು ಹಾಸಿಗೆಯಾಗಿಸಿ ನೆಲದ ಮೇಲೆಯೇ ಮಲಗುತ್ತಾಳೆ. ಈ ಕಠಿಣ ತಪಸ್ಸಿಗೆ ಮೆಚ್ಚಿದ ಬ್ರಹ್ಮನು ಪ್ರತ್ಯಕ್ಷನಾಗಿ ‘ಜೀವನದಲ್ಲಿ ಯಾರೂ ಮಾಡದ ಕಠಿಣ ತಪಸ್ಸನ್ನು ನೀಡು ಮಾಡಿದಿಯಾ. ಶಿವನ ಮೇಲಿರುವ ಪ್ರೀತಿ ನಿಜವಾದದ್ದು. ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ’ ಎಂದು ಆಶೀರ್ವದಿಸಿದನು. ಹೀಗೆ ಕಠೋರ ತಪಸ್ಸು ಮಾಡಿದ ಪಾರ್ವತಿಯು ಬ್ರಹ್ಮಚಾರಿಣಿಯೆಂಬ ಹೆಸರನ್ನು ಪಡೆಯುತ್ತಾಳೆ. ಮುಂದೆ ಶಿವನು ಈಕೆಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.
ಪೂಜಾ ವಿಧಾನ
– ಶಾರದೀಯ ನವರಾತ್ರಿಯ ಎರಡನೇ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.
– ತಾಯಿಗೆ ಹೂವು, ಅಕ್ಷತೆ, ಶ್ರೀಗಂಧ ಇತ್ಯಾದಿಗಳನ್ನು ಅರ್ಪಿಸಿ.
– ಧೂಪದ್ರವ್ಯ ಮತ್ತು ದೀಪಗಳನ್ನು ಬೆಳಗಿಸುವ ಮೂಲಕ ಮಾತೃ ದೇವಿಯ ಮಂತ್ರಗಳನ್ನು ಭಕ್ತಿಯಿಂದ ಪಠಿಸಿ ಮತ್ತು ಆರತಿ ಮಾಡಿ.
-ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸಿ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
ಬ್ರಹ್ಮಚಾರಿಣಿ ಹೇಗಿರುತ್ತಾಳೆ?
ಬ್ರಹ್ಮಚಾರಿಣಿಯನ್ನಯ ಬಿಳಿ ಬಟ್ಟೆಗಳಲ್ಲಿ ಶಾಂತಿಯುತ ಮತ್ತು ಅಹ್ಲಾದಕರ ನೋಟದಲ್ಲಿ ಚಿತ್ರಿಸಲಾಗಿದೆ. ಆಕೆ ಒಂದು ಕೈಯಲ್ಲಿ ಜಪ ಮಾಲೆ ಮತ್ತು ಇನ್ನೊಂದು ಕೈಯಲ್ಲಿ ಸಾಂಪ್ರದಾಯಿಕ ನೀರಿನ ಮಡಿಕೆಯಾದ ಕಮಂಡಲವನ್ನು ಹಿಡಿದಿದ್ದಾಳೆ. ಪುರಾಣಗಳ ಪ್ರಕಾರ ಬ್ರಹ್ಮಚಾರಿಣಿ ಶಿವನಿಗಾಗಿ ಅತ್ಯಂತ ಕಠಿಣ ತಪ್ಪಸ್ಸು ಮಾಡಿದಳು.
ಮಂತ್ರ
ಓಂ ದಧಾನ ಕರಪದ್ಮಭ್ಯಾಮಕ್ಷಮಾಲಾ ಕಮಂಡಲ (ಎರಡು ಬಾರಿ)
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ( ಎರಡು ಬಾರಿ)
ಓಂ ದೇವೀ ಬ್ರಹ್ಮಚಾರಿಣ್ಯೈ ನಮ: (ಎರಡು ಬಾರಿ)
ಪೂಜೆಯಿಂದೇನು ಫಲ?
ಬ್ರಹ್ಮಚಾರಿಣಿಯನ್ನು ಪೂಜಿಸುವ ಭಕ್ತರು ಸಂತೋಷದ ದಾಂಪತ್ಯ ಜೀವನವನ್ನು ಪಡೆಯುತ್ತಾರೆ. ಅವಿವಾಹಿತರಿಗೆ ಉತ್ತಮ ಜೀವನ ಸಂಗಾತಿ ಸಿಗಲಿದ್ದಾರೆ. ಜೀವನದಲ್ಲಿ ಶಾಂತಿ, ಸಂತೋಷ ಪ್ರಾಪ್ತಿಯಾಗಲಿದೆ ಎಂದು ನಂಬಲಾಗುತ್ತದೆ. ತನ್ನ ಭಕ್ತರಿಗೆ ಬ್ರಹ್ಮಚಾರಿಣಿ ದೇವಿ, ಬುದ್ಧಿವಂತಿಕೆ ಹಾಗೂ ಸಂತೋಷವನ್ನು ನೀಡಿ ಆಶೀರ್ವಧಿಸುತ್ತಾಳೆ.