ಕಲಬುರಗಿ: ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಗೆ ಬುರ್ಖಾ ಧರಿಸಿ ಬಸ್ ಹತ್ತು ಎಂದು ಬಸ್ ಚಾಲಕ ಕಿರಿಕ್ ಮಾಡಿದ ರಾಜ್ಯ ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ಬಸ್ ನಿಲ್ದಾಣದಲ್ಲಿ ಓಕಳಿ ಗ್ರಾಮದ ವಿದ್ಯಾರ್ಥಿಗಳು ಶಾಲೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದರು. ಬಸ್‌ನಲ್ಲಿ ಮನೆಗೆ ಹೋಗಬೇಕಾದ್ದರಿಂದ ಬಸ್ ಬರುತ್ತಿದ್ದಂತೆ ಅದನ್ನೇರಲು ಕಾಯುತ್ತಿದ್ದರು. ಈ ವೇಳೆ ಬಸ್ ಚಾಲಕ ಮೆಹಬೂಬ್ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಂಡು ಅವರಿಗೆ ಬುರ್ಖಾ ಧರಿಸದಿದ್ದರೆ ಬಸ್ ಹತ್ತದಂತೆ ಕಿರಿಕ್ ಮಾಡಿದ್ದಾನೆ. ಬಸ್ ಚಾಲಕ ದುರ್ವರ್ತನೆ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಕಲಬುರಗಿಯಿಂದ ಬಸವಕಲ್ಯಾಣಕ್ಕೆ ತೆರಳುತ್ತಿದ್ದ KA38 F1074 ನಂಬರ್ ನ ಸಾರಿಗೆ ಬಸ್‌ನಲ್ಲಿ ಚಾಲಕನಾಗಿದ್ದ ಮೆಹಬೂಬ್ ವಿದ್ಯಾರ್ಥಿನಿಯರ ಜೊತೆ ಬುರ್ಖಾ ಧರಿಸುವಂತೆ ಕಿರಿಕ್ ಮಾಡಿದ್ದನ್ನು ಖಂಡಿಸಿ ಅಲ್ಲೇ ಇದ್ದ ಶಾಲಾ ಶಿಕ್ಷಕ ಮೆಹಬೂಬ್‌ನ ಹುಚ್ಚುಗೇಡಿತನವನ್ನು ಪ್ರಶ್ನಿಸಿದ್ದಾರೆ. ಆಗ ಶಿಕ್ಷಕನ ಜೊತೆಯೂ ಜಗಳ ಮಾಡಿದ್ದ ಚಾಲಕ ಯಾರಿಗೆ ದೂರು ಕೊಡ್ತೀಯಾ ಕೊಡು ಎಂದು ಗೂಂಡಾವರ್ತನೆ ಮಾಡಿದ್ದ. ಇದೀಗ ವಿದ್ಯಾರ್ಥಿನಿಯರೊಂದಿಗೆ ದುರ್ವರ್ತನೆ ತೋರಿದ್ದ ಸಾರಿಗೆ ಬಸ್ ಚಾಲಕನ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.