ಲಕ್ನೋದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೂರಾರು ಜನರು ತಮ್ಮ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದ ವಾಶಿ ಎಂಬ ಪುಟ್ಟ ಯುವತಿಯೊಬ್ಬಳು ಮುಂದೆ ಬಂದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮುಗ್ಧವಾಗಿ ಮನವಿ ಮಾಡಿಕೊಂಡಿದ್ದಾಳೆ.

ಹೊಳೆಯುವ ಕಣ್ಣುಗಳು ಮತ್ತು ಆತ್ಮವಿಶ್ವಾಸದಿಂದ ಅವಳು ಮುಖ್ಯಮಂತ್ರಿಯತ್ತ ನೋಡಿ, ದಯವಿಟ್ಟು ನನ್ನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾಳೆ. ಆ ಕ್ಷಣ ಎಲ್ಲರ ಗಮನ ಸೆಳೆದಿದೆ. ನಗುವಿನೊಂದಿಗೆ ಸಿಎಂ ಯೋಗಿ ಪ್ರತಿಕ್ರಿಯಿಸಿದ್ದು, ಆಕೆ ಯಾವ ಶಾಲೆಗೆ ಹೋಗಲು ಬಯಸುತ್ತಾಳೆ ಮತ್ತು ಯಾವ ತರಗತಿಗೆ ಸೇರಲು ಆಸಕ್ತಿ ಹೊಂದಿದ್ದಾಳೆ ಎಂದು ವಿಚಾರಿಸಿದ್ದಾರೆ.
ನೀವು ಯಾವ ಶಾಲೆಗೆ ಹೋಗಲು ಬಯಸುತ್ತೀರಿ? ನೀವು ಯಾವ ತರಗತಿಗೆ ಸೇರಲು ಬಯಸುತ್ತೀರಿ? 10 ನೇ ತರಗತಿಯೋ ಅಥವಾ 11 ನೇ ತರಗತಿಯೋ ಎಂದು ಕೇಳಿದ್ದಾರೆ. ನಂತರ ಅವರು ಅಧಿಕಾರಿಗಳಿಗೆ ಆ ಪುಟ್ಟ ಬಾಲಕಿಯನ್ನು ಅವಳ ನೆಚ್ಚಿನ ಶಾಲೆಯಲ್ಲಿ ದಾಖಲಿಸಲು ಆದೇಶಿ ಹೊರಡಿಸಿದ್ದಾರೆ.
ಇನ್ನೂ ಇದಾದ ಬಳಿಕ, ಬಾಲಕಿ ವಾಶಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗಿನ ಭೇಟಿ ಬಗ್ಗೆ ಮಾತನಾಡಿದ್ದು, ನಾನು ಯೋಗಿ ಜಿ ಅವರನ್ನು ಭೇಟಿಯಾದೆ. ನನ್ನನ್ನು ಶಾಲೆಗೆ ನೋಂದಾಯಿಸಲು ನಾನು ವಿನಂತಿಸಿದೆ. ಅವರು ಅದನ್ನು ಮಾಡುವುದಾಗಿ ಭರವಸೆ ನೀಡಿದರು. ನನ್ನ ಊರು ಮೊರಾದಾಬಾದ್, ಅವರು ನನಗೆ ಚಾಕೊಲೇಟ್ ಮತ್ತು ಬಿಸ್ಕತ್ತು ನೀಡಿದರು ಬಾಲಕಿ ವಾಶಿ ಪ್ರತಿಕ್ರಿಯಿಸಿದ್ದಾಳೆ.