ಉಪ್ಪಳ: ಸಿಡಿಲು ಬಡಿದು ವಿವಿಧೆಡೆ ತೆಂಗಿನ ಮರಗಳು, ವಿದ್ಯುತ್ ಉಪಕರಣಗಳು ಹಾನಿಗೀಡಾಗಿದ್ದು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನ.3ರಂದು ರಾತ್ರಿ ಸುಮಾರು 8.30ರ ವೇಳೆ ನಡೆದಿದೆ.


ಅಂಬಾರು ಕೃಷ್ಣನಗರ ನಿವಾಸಿ ಮೊಹಮ್ಮದಲಿ ಎಂಬವರ ತೆಂಗಿನ ಮರಕ್ಕೆ ಭಾರೀ ಜೋರಾಗಿ ಸಿಡಿಲು ಬಡಿತ ಉಂಟಾಗಿದೆ. ಇದರಿಂದ ತೆಂಗಿನ ಮರ ಉರಿದಿದೆ. ಇದೇ ವೇಳೆ ಒಳಗಡೆಯಿದ್ದ ಪತ್ನಿ ನಜೀಮ ರವರ ಕೈಗೆ ಶಾಕ್ ತಗಲಿದ ಅನುಭವ ಉಂಟಾಗಿದ್ದು, ಕುಸಿದು ಬಿದ್ದು ಅಪಾಯದಿಂದ ಪಾರಾಗಿದ್ದಾರೆ.

ವಯರಿಂಗ್ ಹಾನಿಗೊಂಡಿದ್ದು, ಕಾಂಕ್ರೀಟ್ ಮನೆಯ ಎದುರುಭಾಗ ಗೋಡೆ ಬಿರುಕು ಬಿಟ್ಟಿರುವುದಾಗಿ ಮೊಹಮ್ಮದಲಿ ತಿಳಿಸಿದ್ದಾರೆ. ತೆಂಗಿನ ಮರಕ್ಕೆ ತಗಲಿದ ಬೆಂಕಿಯನ್ನು ಸ್ಥಳೀಯ ಯುವಕರು ನಂದಿಸಿದ್ದಾರೆ. ಕೃಷ್ಣನಗರ ನಿವಾಸಿ ಉಪ್ಪಳ ಬಸ್ ಏಜಂಟ್ ಸುಕುಮಾರ ರವರ ಮನೆಯ ಇನೋಟರ್ ಹಾಗೂ ಬಲ್ಬುಗಳು ಹಾನಿಗೀಡಾಗಿದೆ.
ಈ ಪರಿಸರದಲ್ಲಿ ಹಲವು ದಾರಿ ದೀಪಗಳು ಹಾನಿಗೊಂಡಿದೆ. ಮುಟ್ಟಂ ಬೇರಿಕೆ ರಸ್ತೆ ಸಮೀಪದ ಜಾನಕಿ ಎಂಬವರ ಮನೆ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದಿದೆ. ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಈ ಪರಿಸರದಲ್ಲಿ ವಿದ್ಯುತ್ ಲೈನ್ ಹಾಗೂ ಹಲವು ಮನೆಗಳು, ದೈವಸ್ಥಾನ ಇವರುವ ಪ್ರದೇಶವಾಗಿದ್ದು ಅಪಾಯದಿಂದ ಪಾರಾಗಿದೆ.




