ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ನಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಸುರತ್ಕಲ್ ಮತ್ತು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಳೆಯಂಗಡಿ ಸಮೀಪದ ಚೇಳ್ಯಾರಿನ ದೀಪಕ್ (33) ಮತ್ತು ಮರಕಡದ ಪಂಜಗುತ್ತು ಮನೆಯ ಸಂದೀಪ್ ಶೆಟ್ಟಿ (38) ಬಂಧಿತ ಆರೋಪಿಗಳಾಗಿದ್ದು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಪರಿಸರದಲ್ಲಿ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರು ಎಂಬಲ್ಲಿ ಮೊಬೈಲ್ ಫೋನ್ನಲ್ಲಿ ಬೆಟ್ಟಿಂಗ್ ಅ್ಯಪ್ ಉಪಯೋಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳ ಸೋಲು ಗೆಲುವಿನಲ್ಲಿ ಅದೃಷ್ಟ ಆಟವಾದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡು ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದರು.
ಆರೋಪಿಗಳಿಂದ ಬೆಟ್ಟಿಂಗ್ ದಂಧೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ 31,000 ರೂ. ನಗದು ಹಾಗೂ 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 1,11,000 ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ. ಈ ದಂಧೆಯಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.