ಮಂಗಳೂರು: ವ್ಯಕ್ತಿಯೋರ್ವ ಪೊಲೀಸ್ ಠಾಣೆಯಲ್ಲೇ ತನ್ನ ಒಂದೂವರೆ ವರ್ಷದ ಮಗುವನ್ನು ಕುತ್ತಿಗೆ ಹಿಡಿದು, ಎತ್ತಿ ನೆಲಕ್ಕೆಸೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ವ್ಯಾಸನಗರದ ನಿವಾಸಿ ಮಹೇಶ್ ಆರೋಪಿಯಾಗಿದ್ದಾನೆ. ಈತ ಹಲವು ಸಮಯದಿಂದ ಪತ್ನಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈತನ ಪತ್ನಿ ನನ್ನ ಇಬ್ಬರು ಮಕ್ಕಳನ್ನು ಮತ್ತು ನನ್ನನ್ನು ಕೊಲ್ಲುತ್ತೇನೆಂದು ಹಾಗೂ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆಂದು ಬೆದರಿಸಿ ಹೊಡೆಯಲು ಬಂದಿದ್ದಾನೆ ಎಂದು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಪತಿಯಿಂದ ತಪ್ಪಿಸಿಕೊಂಡು ಬಂದು ಭಾನುವಾರ ತಡರಾತ್ರಿ ಕದ್ರಿ ಠಾಣಾ ಪೊಲೀಸರಲ್ಲಿ ತನ್ನ ಮಕ್ಕಳನ್ನು ರಕ್ಷಿಸುವಂತೆ ಕೋರಿಕೊಂಡಿದ್ದರು.
ಪೊಲೀಸರು ಆಕೆಯ ಮನೆಗೆ ಹೊರಡುತ್ತಿದ್ದಂತೆ ಆರೋಪಿ ಮಹೇಶ್ ತನ್ನ 6 ವರ್ಷದ ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದ. ಪೊಲೀಸರು ಆತನ್ನನು ವಿಚಾರಣೆ ನಡೆಸುತ್ತಿದ್ದ ವೇಳೆ ನನ್ನ ಮಗುವಿಗೆ ಏನು ಬೇಕಾದರೂ ಮಾಡಬಹುದು ಅದನ್ನು ಕೇಳಲು ನೀವು ಯಾರು ಎಂದು ಹೇಳಿ ಮಗುವಿನ ಕುತ್ತಿಗೆಯನ್ನು ತಿರುಗಿಸಿ ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಬಿಸಾಡಿ ಕೊಲ್ಲಲು ಪ್ರಯತ್ನಿಸಿದ್ದಾನೆ.
ಮಗುವಿನ ಕುತ್ತಿಗೆಗೆ ಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕಿರುಚಾಡುತ್ತಿದ್ದು ತಕ್ಷಣ ಇಲಾಖಾ ವಾಹನದಲ್ಲಿ ತಾಯಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಪೊಲೀಸರ ಕರ್ತವ್ಯ ಪಾಲಿಸಲು ಬಿಡದೆ ಠಾಣೆಯಲ್ಲಿ ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿ ಹಸುಗೂಸನ್ನು ಕೊಲ್ಲಲು ಪ್ರಯತ್ನಿಸಿದ್ದು ಮಹೇಶ್ ವಿರುದ್ದ ಸುಮೊಟೋ ಪ್ರಕರಣ ದಾಖಲಾಗಿದೆ.