ಕಲಬುರಗಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಜನಸ್ನೇಹಿ ಹೆಲ್ತ್ ಎಟಿಎಂ ಆರಂಭಗೊಂಡಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯ ಪರೀಕ್ಷೆಯ ರಿಪೋರ್ಟ್‌ಗಳನ್ನು ಪಡೆಯಬಹುದಾಗಿದೆ.
ಜನರು ಎಟಿಎಂ ಅನ್ನು ಹಣ ತೆಗೆಯಲು ಬಳಸುತ್ತಾರೆ. ಆದರೆ ಇದೀಗ ಎಟಿಎಂ ನಿಂದ ಹಣವಷ್ಟೇ ಅಲ್ಲ, ಹೆಲ್ತ್ ರಿಪೋರ್ಟ್ ಕೂಡ ಪಡೆಯಬಹುದಾಗಿದ್ದು, ರಾಜ್ಯ ಸರ್ಕಾರದ ಹೆಲ್ತ್ ಡಿಪಾರ್ಟ್‌ಮೆಂಟ್‌ನಿಂದ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಹೆಲ್ತ್ ಎಟಿಎಂ ಪ್ರಾರಂಭಿಸಿದ್ದು ಕೇವಲ ಹತ್ತು ನಿಮಿಷದಲ್ಲೇ ಸಾರ್ವಜನಿಕರು ಹೆಲ್ತ್ ರಿಪೋರ್ಟ್ ಪಡೆಯಬಹುದಾಗಿದೆ.
ಸೆ.17 ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಅನ್ನು ಉದ್ಘಾಟಿಸಿದರು. ಇದೀಗ ಅವು ಕಾರ್ಯಾಚರಣೆ ಆರಂಭಿಸಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುವುದು, ಅನಾವಶ್ಯಕ ಹಣ ಖರ್ಚು ಮಾಡುವುದು, ಆಸ್ಪತ್ರೆಗೆ ಅಲೆದಾಡುವುದು ತಪ್ಪಲಿದೆ.
ಖಾಸಗಿ ಕಂಪೆನಿಯೊಂದು CSR ಅನುದಾನದ ಅಡಿ 25 ಹೆಲ್ತ್ ಎಟಿಎಂ ಘಟಕಗಳನ್ನು ಖರೀದಿಸಿ ಕಲ್ಯಾಣ ಕರ್ನಾಟಕ ದಿನದಿಂದೇ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದೆ.
ಹೆಲ್ತ್ ಎಟಿಎಂನಿಂದ ಎಲ್ಲ ಪರೀಕ್ಷೆಗಳನ್ನು ಸಾರ್ವಜನಿಕರೇ ಮಾಡಿಕೊಳ್ಳಲು ಬರುವುದಿಲ್ಲ ಎಂಬುದು ಗಮನಿಸಬೇಕು. ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆಯಂಥ ಕೆಲವು ನಿರ್ದಿಷ್ಟ ಟೆಸ್ಟ್‌ಗಳನ್ನು ಅಲ್ಲಿನ ಲ್ಯಾಬ್ ಟೆಕ್ನಿಷಿಯನ್ ಮಾಡಿದರೆ ಉಳಿದ ಸಾಮಾನ್ಯ ಪರೀಕ್ಷೆಗಳಾದ ಬ್ಲಡ್, ಆಕ್ಸಿಜನ್ ಲೆವೆಲ್, ತೂಕ ಪರೀಕ್ಷೆ ಇವೆಲ್ಲ ಸ್ವತಃ ಮಾಡಿಕೊಳ್ಳಬಹುದಾಗಿದೆ. ಇದು 50ಕ್ಕೂ ಹೆಚ್ಚು ಆರೋಗ್ಯ ಪರೀಕ್ಷೆಗಳ ರಿಪೋರ್ಟ್ ನೀಡಲಿದ್ದು, ಇಸಿಜಿ ಸೌಲಭ್ಯ ಕೂಡ ಇದೆ. ಇಂಥದ್ದೊಂದು ಹೆಲ್ತ್ ಎಟಿಎಂ ಆರಂಭಿಸಿದ್ದಕ್ಕಾಗಿ ಕಲಬುರಗಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ.