ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

Share with

ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ.

ಬೆಳ್ತಂಗಡಿ: ಸಮಾಜದಲ್ಲಿರುವ ವೈಪರಿತ್ಯವನ್ನು ಸರಿದೂಗಿಸಿ ಸಾತ್ವಿಕ ಬದುಕು ಕಟ್ಟಿಕೊಡುವ ಸತ್ಕಾರ್ಯವೇ ಜನಜಾಗೃತಿ ವೇದಿಕೆಯ ಕಾರ್ಯ. ದುಶ್ಚಟ ಕ್ಕೊಳಗಾದವರನ್ನು ಮನಃ ಪರಿವರ್ತನೆ ಮಾಡುವ ಮೂಲಕ ಅವರ ಬದುಕನ್ನು ಹಸನಾಗಿಸುವುದಲ್ಲದೆ ಅವರ ಕುಟುಂಬಕ್ಕೆ ಬೆಳಕನ್ನು ನೀಡುವ ಕಾರ್ಯ ಮಾಡಲಾಗುತ್ತದೆ.ಇಂತಹ ಲಕ್ಷಾಂತರ ಕುಟುಂಬಗಳ ಕಣ್ಣೀರು ಒರೆಸುವ ಮೂಲಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಎಸ್.ಕೆ.ಡಿ.ಆರ್.ಡಿ.ಪಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್‌.ಎಚ್.ಮಂಜುನಾಥ್ ಸಾಧಕರನ್ನು ಸನ್ಮಾನಿಸಿ ಶುಭಹಾರೈಸಿದರು.
 ಸಾಧಕರನ್ನು ಸನ್ಮಾನಿಸಲಾಯಿತು.

ಅವರು ಸೋಮವಾರ ಬೆಳ್ತಂಗಡಿ ಶ್ರಿ ಮಂಜುನಾಥ ಕಲಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ, ಬಂಟ್ವಾಳ ತಾಲೂಕು ಅಖಿಲ ಜನಜಾಗೃತಿ ವೇದಿಕೆ ಆಶ್ರಯದಲ್ಲಿ “ಶೌರ್ಯ” ವಿಪತ್ತು ನಿರ್ವಹಣಾ ಕಾರ್ಯಕ್ರಮ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದಲ್ಲಿ ಗಾಂಧೀಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಅರೋಗ್ಯಯುತ ಸಮಾಜ ನಿರ್ಮಾಣ ಆಗಬೇಕು. ಸಮಾಜದಲ್ಕಿ ಶಾಂತಿ ಸಾಮರಸ್ಯ ಬೆಳೆಯಬೇಕು ಎಂದು ಡಾ.ಹೆಗ್ಗಡೆಯವರು ಜನಜಾಗೃತಿ ವೇದಿಕೆ ನಿರ್ಮಾಣ ಮಾಡಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಇರುವಂತೆ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಗಾಂಧೀಜಿಯವರ ಕನಸು ರಾಜ್ಯದಲ್ಲಿ ನನಸು ಮಾಡಿ ನವಜೀವನ ಕಲ್ಪಿಸಿದ ಕೀರ್ತಿ ಡಾ.ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದು ಶುಭಹಾರೈಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಧಾನ‌ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ದೇಶಕಂಡ ಮಹಾತ್ಮರ ಕನಸು ನನಸು ಮಾಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಗ್ರಾಮೀಣ ಅಭಿವೃದ್ಧಿ ಪ್ರಾರಂಭಿಸಿದರು. ಅದು ಪೂರ್ಣ ಪ್ರಮಾಣದಲ್ಲಿ ಸಫಲತೆ ಕಾಣಲು ಜನಜಾಗೃತಿಯ ಮೂಲಕ 25 ವರ್ಷ ಮಿಕ್ಕಿ ಸಮಾಜದ ಪೀಡಿತ, ಶೋಷಿತರ ಮಧ್ಯೆ ಕೆಲಸ ಮಾಡುತ್ತ, ಅವರ ಬದುಕನ್ನು ಅರಳಿಸಲು ರಾಜ್ಯದ ಉದ್ದಗಲಕ್ಕೂ ಕೊಂಡೊಯ್ದು ಪರಿವರ್ತನೆ ತಂದವರು ಹೆಗ್ಗಡೆಯವರು ಎಂದರು.

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಪ್ರಧಾನ ಧರ್ಮಗುರು ಫಾ.ವೊಲ್ಟರ್ ಒಸ್ವಲ್ಡ್ ಡಿಮೆಲ್ಲೊ, ಸಮಾಜದಲ್ಲಿ ಅನೇಕ ಪಿಡುಗಗಳ ನಡುವೆ ಮಾದಕ ವ್ಯಸನಕ್ಕೆ ಅನೇಕ ಯುವ, ಯುವತಿಯರು ಬಲಿಯಾಗುತ್ತಿದ್ದಾರೆ. ಇದರೆಡೆಗೆ ದೊಡ್ಡ ಜನಜಾಗೃತಿಯಾಗಬೇಕು ಎಂದು ಆಶಿಸಿದರು. ಹೊಸನಗರ ಜುಮ್ಮಾ ಮಸೀದಿ ಪ್ರಧಾನ ಧರ್ಮಗುರು ಮೌಲಾನ ಅಶ್ರಫ್ ಹಿಮಾಮಿ ವೇದಿಕೆಯಲ್ಲಿದ್ದರು. ವ್ಯಸನಮುಕ್ತ ಕುಟುಂಬ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ವಿಚಾರವಾಗಿ ನ್ಯಾಯವಾದಿ ಸಹನಾ ಕುಂದರ್ ಮಾತನಾಡಿದರು.

ಎಸ್.ಕೆ.ಡಿ.ಆರ್.ಡಿ.ಪಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್‌.ಎಚ್.ಮಂಜುನಾಥ್ ಸಾಧಕರನ್ನು ಸನ್ಮಾನಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮುಂಬೈ ಉದ್ಯಮಿ ಆರ್.ಬಿ.ಹೆಬ್ಬಳ್ಳಿ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜಾ, ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೇಂದ್ರ ಒಕ್ಕೂಟ ಬೆಳ್ತಂಗಡಿ ಅಧ್ಯಕ್ಷ ಸೀತಾರಾಮ ಆರ್., ಗುರುವಾಯನಕೆರೆ ಅಧ್ಯಕ್ಷ ಸದಾನಂದ ಬಂಗೇರ, ಬಂಟ್ವಾಳ ಅಧ್ಯಕ್ಷ ಚಿದಾನಂದ ರೈ ಕಕ್ಯ, ಯೋಜನಾಧಿಕಾರಿಗಳಾದ ದಯಾನಂದ ಪೂಜಾರಿ, ಮಾಧವ ಗೌಡ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ‌ ವಂದಿಸಿದರು. ಕೃಷಿ ವಿಭಾಗದ ಯೋಜನಾಧಿಕಾರಿ ರಾಮ್ ಕುಮಾರ್ ನಿರೂಪಿಸಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಹಸ್ತಾಂತರ ಮಾಡಲಾಯಿತು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಸಮಾವೇಶದಲ್ಲಿ ಹಕ್ಕೊತ್ತಾಯ ಮತ್ತು ಠರಾವು ಮಂಡಿಸಿದರು. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ, ಅಬಕಾರಿ ಇಲಾಖೆಯಿಂದ ಹೊಸ ಮದ್ಯದಂಗಡಿ ಪ್ರಸ್ತಾವನೆ ತಡೆದು ಸರಕಾರ ಶಾಂತಿ ಕಾಪಾಡಬೇಕು. ಶಾಲೆ ಕಾಲೇಜುಗಳಲ್ಲಿ ಜಾಗೃತಿ, ಪಠ್ಯದಲ್ಲಿ ಮದ್ಯದ ಅಪಾಯದ ಕುರಿತು ಸೇರ್ಪಡೆ, ಬಜೆಟ್ ನಲ್ಲಿ ಇದಕ್ಕೆ ಅನುದಾನ ಮೀಸಲಿಡುವಂತೆ ಶಾಸಕ ಹರೀಶ್ ಪೂಂಜರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಸಾಧಕರಿಗೆ ಸನ್ಮಾನ
ಪಾನಮುಕ್ತರಾದವರು ಅನಿಸಿಕೆ ವ್ಯಕ್ತಪಡಿಸಿದರು. ನವಜೀವನ ಸಾಧಕರನ್ನು ಸನ್ಮಾನಿಸಲಾಯಿತು. ಉತ್ತಮ ಘಟಕ ಪ್ರಶಸ್ತಿಗೆ ಪಾತ್ರರಾದ ಬೆಳ್ತಂಗಡಿಯ ನಡ ಘಟಕ, ಗುರುವಾಯನಕೆರೆಯ ಅಳದಂಗಡಿ ಘಟಕದ ಸದಸ್ಯರನ್ನು ಹಾಗೂ ಶೌರ್ಯ ಜೋಡಿಯಾಗಿ ತಣ್ಣೀರುಪಂತ ಘಟಕದ ಶೋಭಾ ಪ್ರಶಾಂತ್ ದಂಪತಿಯನ್ನು ಗೌರವಿಸಲಾಯಿತು.


Share with

Leave a Reply

Your email address will not be published. Required fields are marked *