ರಾಜ್ಯದ ಗ್ರಾಮ ಪಂಚಾಯಿತಿಗಳ ಗ್ರಂಥಪಾಲಕರ ಬಹುದಿನಗಳ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಗ್ರಂಥಪಾಲಕರಿಗೆ ₹ 15,196 ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆ ಸಿಗಲಿದೆ.
ಈ ಹಿಂದೆ ₹ 12,000 ವೇತನ ನೀಡಲಾಗುತ್ತಿತ್ತು.
ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನಾಗಿ ಬದಲಿಸಲಾಗಿದೆ. ಕೆಲಸದ ಅವಧಿಯನ್ನು ಎರಡು ಗಂಟೆ ಹೆಚ್ಚಳ ಮಾಡಲಾಗಿದೆ.
ಸಾರ್ವಜನಿಕ ರಜಾ ದಿನಗಳು, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಮಂಗಳವಾರ ಹಾಗೂ ವಾರದ ರಜೆ (ಸೋಮವಾರ) ಹೊರತು ಪಡಿಸಿ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶುಕ್ರವಾರಗಳಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ; ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಗ್ರಂಥಾಲಯ ತೆರೆಯಲು ನಿರ್ಧರಿಸಲಾಗಿದೆ.
ವೇತನ ಪರಿಷ್ಕರಣೆ ಕುರಿತು ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ, ‘ಸಮೃದ್ಧ ಸಮಾಜ ನಿರ್ಮಿಸಲು, ಸ್ಥಿರ ಸಮಾಜದ ಅಗತ್ಯವಿದೆ. ಸ್ಥಿರ ಸಮಾಜ ನಿರ್ಮಾಣವಾಗಲು ಪ್ರಬುದ್ಧ ಸಮಾಜದ ಅಗತ್ಯವಿದೆ. ನಾಡಿನ ಗ್ರಂಥಾಲಯ ಹಾಗೂ ಇವುಗಳನ್ನು ಪೂರ್ಣಬಳಕೆಗೆ ಸನ್ನದ್ಧಗೊಳಿಸುವ ಗ್ರಂಥಪಾಲಕರನ್ನು ಸಬಲೀಕರಣಗೊಳಿಸಲು ಹೊರಡಿಸಲಾಗಿರುವ ಈ ಆದೇಶ ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ನಮ್ಮ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ’ ಎಂದು ಹೇಳಿದ್ದಾರೆ.