ಹ್ಯಾಕರ್‌ಗಳ ಆಹಾರವಾದ ದ.ಕ ಯುವಕ! ವಂಚನೆ ಆರೋಪದಲ್ಲಿ ವಿದೇಶಿ ಜೈಲಲ್ಲಿ ಕಡಬ ಮೂಲದ ಚಂದ್ರಶೇಖರ್

Share with

ಮಂಗಳೂರು : ಉದ್ಯೋಗಕ್ಕೆ ತೆರಳಿದ ವೇಳೆ ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಿನಾ ಕಾರಣ ವಂಚನೆ ಆರೋಪಕ್ಕೆ ಒಳಗಾಗಿ ದ.ಕ. ಮೂಲದ ವ್ಯಕ್ತಿಯೊಬ್ಬರು ವಿದೇಶದಲ್ಲಿ ಬಂಧಿಯಾಗಿದ್ದಾರೆ.ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ಎಂಬವರೇ ತನ್ನದಲ್ಲದ ತಪ್ಪಿಗೆ ರಿಯಾದ್‌ನಲ್ಲಿ ಕಂಬಿ ಎಣಿಸುತ್ತಿದ್ದಾರೆ.ಇವರ ಬಿಡುಗಡೆಗಾಗಿ ಕುಟುಂಬಸ್ಥರು ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಇಲಾಖೆಯ ಕದತಟ್ಟುತ್ತಿದ್ದಾರೆ. ಈ ಬಗ್ಗೆ ಚಂದ್ರಶೇಖರ್‌ ಕುಟುಂಬದ ಪರವಾಗಿ ನಿಕಟವರ್ತಿಗಳಾದ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಮಂಗಳೂರಿನ ಎನ್‌ಇಸಿಎಫ್‌ ಕಾರ್ಯದರ್ಶಿ ಶಶಿಧರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ವಿದೇಶದಲ್ಲಿ ಉದ್ಯೋಗ ಪಡೆದು ಕುಟುಂಬ ಪೋಷಣೆಗಾಗಿ ಚಂದ್ರಶೇಖರ್‌ ಅವರು 2022ರಲ್ಲಿ ರಿಯಾದ್‌ಗೆ ತೆರಳಿದ್ದರು. ಅಲ್ಲಿ ಅಲ್ಪಾನರ್‌ ಸೆರಾಮಿಕ್ಸ್‌ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇರಿದ್ದರು. ಅದೇ ನವೆಂಬರ್‌ನಲ್ಲಿ ಯಾವುದೇ ಹ್ಯಾಕರ್‌ಗಳ ಸಂಚಿಗೆ ಸಿಲುಕಿ ಅಲ್ಲಿನ ಜೈಲಿನಲ್ಲಿ ಬಂಧಿತರಾಗಿದ್ದಾರೆ.ರಿಯಾದ್‌ನಲ್ಲಿ ಮೊಬೈಲ್‌ ಮತ್ತು ಸಿಮ್‌ ಖರೀದಿಗೆ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದರು. ಆಗ ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು ಸಹಿ ನೀಡಿದ್ದರು. ವಾರದ ಬಳಿಕ ಅರೇಬಿಕ್‌ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶವೊಂದು ಬಂದಿತ್ತು. ಅದನ್ನು ಕ್ಲಿಕ್‌ ಮಾಡಿ ನೋಡಿದ್ದರು. ಎರಡು ದಿನ ಬಳಿಕ ದೂರವಾಣಿ ಕರೆಯೊಂದು ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಿತ್ತು. ಅಲ್ಲದೆ ಒಟಿಪಿ ಸಂಖ್ಯೆ ತಿಳಿಸುವಂತೆ ಸೂಚಿಸಿತ್ತು. ಅದರಂತೆ ಚಂದ್ರಶೇಖರ್‌ ಅವರು ಒಟಿಪಿ ಸಂಖ್ಯೆ ತಿಳಿಸಿದ್ದರು. ಜನವರಿಯಲ್ಲಿ ಊರಿನಲ್ಲಿ ನಿಗದಿಯಾಗಿದ್ದ ನಿಶ್ಚಿತಾರ್ಥ, ವಿವಾಹ ಕೆಲಸಗಳಿಗೆ ತಯಾರಿಯಲ್ಲಿ ಮಗ್ನರಾಗಿದ್ದರು. ಒಂದು ವಾರ ಬಳಿಕ ಯಾವುದೇ ಮಾಹಿತಿ ನೀಡದೇ ಅಲ್ಲಿನ ಪೊಲೀಸರು ಬಂದು ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.ರಿಯಾದ್‌ನಲ್ಲಿದ್ದ ಅವರ ಸ್ನೇಹಿತರು ವಿಚಾರಿಸಿದಾಗ ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕ್‌ವೊಂದರಲ್ಲಿ ಅವರದೇ ಹೆಸರಿನಲ್ಲಿ ಖಾತೆ ತೆರೆಯಲಾಗಿತ್ತು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್‌ ಖಾತೆಗೆ 22 ಸಾವಿರ ರಿಯಲ್‌ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆ ಚಂದ್ರಶೇಖರ್‌ ಅವರ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರ ನೀಡಿದ್ದರು. ಹೀಗಾಗಿ ಚಂದ್ರಶೇಖರ್‌ ಅವರನ್ನು ಏಕಾಏಕಿ ಬಂದು ಪೊಲೀಸರು ಜೈಲಿಗೆ ತಳ್ಳಿದ್ದರು. ಚಂದ್ರಶೇಖರ್‌ನ ಸ್ನೇಹಿತರು ಈ ಮಾಹಿತಿಯನ್ನು ಕುಟುಂಬಕ್ಕೆ ತಿಳಿಸಿದ್ದರು. ಹ್ಯಾಕರ್‌ಗಳ ಕಿರುಕುಳದಿಂದ ಚಂದ್ರಶೇಖರ್‌ಗೆ ಅನ್ಯಾಯವಾಗಿದ್ದು, ಇದನ್ನು ತಿಳಿದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.ಕಳೆದ ಎಂಟು ತಿಂಗಳಿಂದ ಅವರ ಕುಟುಂಬ ನ್ಯಾಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಮಗನನ್ನು ಕ್ಷೇಮವಾಗಿ ಸ್ವದೇಶಕ್ಕೆ ಕರೆತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ರಿಯಾದ್‌ ಸರ್ಕಾರ ಚಂದ್ರಶೇಖರ್‌ನ್ನು ಬಂಧಿಸಿದ್ದೇ ಹೊರತು ಸಮಗ್ರ ತನಿಖೆ ನಡೆಸಿಲ್ಲ. ಆತನ ಖಾತೆಗೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ, ಅಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಕುರಿತು ತನಿಖೆ ನಡೆಸದೆ ಕೇವಲ ಮಹಿಳೆಗೆ ವಂಚನೆಯಾಗಿದೆ ಎಂದಷ್ಟೆಕೇಸು ದಾಖಲಿಸಿ ಬಂಧಿಸಿದ್ದಾರೆ.ಚಂದ್ರೇಖರ್‌ ಕೆಲಸ ಮಾಡುವ ಅಲ್ಪಾನರ್‌ ಸೆರಾಮಿಕ್ಸ್‌ ಸಂಸ್ಥೆ ಅವರಿಗೆ ಸೂಕ್ತ ಭದ್ರತೆ ಮತ್ತು ಕಾನೂನು ನೆರವು ನೀಡಬೇಕಿತ್ತು. ಈ ಘಟನೆ ಕುರಿತು ಮನೆಯವರಿಗೂ ಸಂಸ್ಥೆ ಮಾಹಿತಿ ನೀಡಿಲ್ಲ. ಹೀಗಾಗಿ ಸಂಸ್ಥೆಯ ವಿರುದ್ಧ ಕೂಡ ಕಾನೂನು ಸಮರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.


Share with

Leave a Reply

Your email address will not be published. Required fields are marked *