ಬೆಳೆಯುವ ಸಿರಿ ಮೊಳಕೆಯಲ್ಲಿ

Share with

ಎಳೆ ಮಕ್ಕಳನ್ನು ತಂದೆ ತಾಯಿಗಳು ಶಿಕ್ಷಕರ ಜವಾಬ್ದಾರಿಯಲ್ಲಿ ಬಿಡುತ್ತಾರೆ.

ಒಬ್ಬ ಬೇಡನು ಕಾಡಿನಲ್ಲಿ 2 ಸಣ್ಣ ಗಿಳಿ ಮರಿಗಳನ್ನು ಹಿಡಿಯುತ್ತಾನೆ. ಒಂದನ್ನು ಒಬ್ಬ ಕಟುಕನ ಮನೆಗೆ ಮಾರುತ್ತಾನೆ. ಇನ್ನೊಂದನ್ನು ಒಬ್ಬ ಸನ್ಯಾಸಿಯ ಆಶ್ರಮಕ್ಕೆ ಮಾರುತ್ತಾನೆ. ಕೆಲವು ಸಮಯಗಳ ನಂತರ ಬೇಡ ಕೆಲವು ಪ್ರಾಣಿಗಳನ್ನು ಜಿಂಕೆಯ ಚರ್ಮವನ್ನು ಮಾರಲು ಬರುತ್ತಾನೆ. ಆಗ ಕಟುಕನ ಮನೆಯಲ್ಲಿರುವ ಅವನೇ ಕೊಟ್ಟ ಗಿಳಿ ಮರಿ ಅಕೋ ಬಂದ ಅವನನ್ನು ಹಿಡಿ, ಹೊಡಿ ಬಡಿ ಎಂದು ಹೇಳುತ್ತದೆ.

ಅಲ್ಲಿಂದ ಸನ್ಯಾಸಿಯ ಆಶ್ರಮಕ್ಕೆ ಹೋಗುತ್ತಾನೆ. ಅವನು ಕೊಟ್ಟ ಇನ್ನೊಂದು ಗಿಳಿ ಮರಿ ಬನ್ನಿ ಕುಳಿತುಕೊಳ್ಳಿ… ಕೈಕಾಲು ತೊಳೆದುಕೊಳ್ಳಿ… ಬಾಯಾರಿಕೆ ಕುಡಿಯಿರಿ ಎಂದು ಹೇಳುತ್ತದೆ. ಇದನ್ನೇ ಸಂಸ್ಕಾರ ಎನ್ನುವುದು. ಕಟುಕನ ಮನೆಯ ಗಿಳಿಗೆ ಹೊಡಿ.. ಬಡಿ.. ಎಂಬ ಮಾತು ಕೇಳಿ ಅದೇ ಅಭ್ಯಾಸವಾಯಿತು. ಸನ್ಯಾಸಿಯ ಆಶ್ರಮದಲ್ಲಿ ಇದ್ದ ಗಿಳಿಗೆ ಸೌಜನ್ಯ ಪೂರಕವಾಗಿ ಬನ್ನಿ.. ಕುಳಿತುಕೊಳ್ಳಿ.. ಬಾಯಾರಿಕೆ.. ಕುಡಿಯಿರಿ ಎಂಬ ಮಾತುಗಳೇ ಅಭ್ಯಾಸವಾಯಿತು. ಇಲ್ಲಿ ಅರ್ಥೈಸಿಕೊಳ್ಳಬೇಕಾದ ವಿಚಾರಗಳೆಂದರೆ ಮಗುವಿನ ಮೃದು ಮನಸ್ಸಿಗೆ ತಾಯಿ ತಂದೆಯರು ಉತ್ತಮ ಸಂಸ್ಕಾರದ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ಮಕ್ಕಳ ಎಳೆ ಮನಸ್ಸು ಹಸಿ ಮಣ್ಣಿನ ಗೋಡೆ ಇದ್ದಂತೆ. ಏನು ಎಸೆದರು ಥಟ್ಟನೆ ಅಂಟಿಕೊಳ್ಳುತ್ತದೆ. ಅದೇ ರೀತಿ ಸಂಸ್ಕಾರ ಸಂಸ್ಕೃತಿ ರೂಪು ಗೊಳ್ಳುವುದು ಕೂಡ ಬಾಲ್ಯದಿಂದಲೇ.

ಅದೇ ರೀತಿ ವಿದ್ಯಾಲಯದ ಎಳೆ ಮನಸ್ಸಿನ ಕಂದಮ್ಮಗಳು, ದಾರಿದೀಪವನ್ನು ತೋರಿಸುವ ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗುತ್ತಾ, ಅಮ್ಮನಾಗುತ್ತಾ, ಗುರುವಾಗುತ್ತಾ ಸಹಕರಿಸಿ ಎಳೆ ಮನಸ್ಸುಗಳಲ್ಲಿ ಸುಸಂಸ್ಕೃತ ನಡೆ ನುಡಿಯ ಸುಂದರ ಪುಷ್ಪಗಳು ಅರಳುವುದು. ಮನುಷ್ಯ ಜೀವನದ ಬಾಲ್ಯದಲ್ಲಿ ತಂದೆ ತಾಯಿಯವರೇ ಮಗುವಿಗೆ ಮೊದಲ ಗುರುಗಳು. ಅದಕ್ಕೆ ಹೇಳುತ್ತಾರೆ, ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು. ಇಲ್ಲಿಂದ ಹೊರಗೆ ಕಾಲಿಡುವುದು ವಿದ್ಯಾಲಯಕ್ಕೆ. ಈ ಎಳೆ ಮಕ್ಕಳನ್ನು ತಂದೆ ತಾಯಿಗಳು ಶಿಕ್ಷಕರ ಜವಾಬ್ದಾರಿಯಲ್ಲಿ ಬಿಡುತ್ತಾರೆ.

ಈಗ ನಾವು ಈ ಪುಟ್ಟ ಮಕ್ಕಳ ಭವಿಷ್ಯದ ಸುಂದರ ಚಿತ್ರಣವನ್ನು ಬರೆಯುವ ಚಿತ್ರ ಕಲಾವಿದರಾಗಬೇಕು. ಮತ್ತು ಒಂದು ಜಾಗೃತಿಯ ವಿಚಾರವೆಂದರೆ ಈಗ ಎಲ್ಲೆಡೆಯಲ್ಲಿಯೂ ಆವರಿಸಿರುವ ಮೊಬೈಲ್ ಬಳಕೆ. ಹಿಂದೆ ಮೊಬೈಲ್ ಇರಲಿಲ್ಲ. ಬದಲಾಗಿ ದೇವರ ಭಜನೆಯ ತಾಳಗಳಿದ್ದವು. ಈಗ ತಾಳ ತಪ್ಪಿದೆ, ಮೊಬೈಲ್ ಕೈಗೆ ಬಂದಿದೆ. ಮಕ್ಕಳ ಯೋಚನಾ ಲಹರಿ ಕುಗ್ಗಿದೆ. ಬದಲಾಗಿ ಅಂತರ್ಜಾಲದ ಕುತೂಹಲ ಹಿಗ್ಗಿದೆ. ಈ ಬಗ್ಗೆ ನಾವು ತುಂಬಾ ಜಾಗೃತರಾಗಿರಬೇಕು. ಮಕ್ಕಳ ಕೈಯಿಂದ ಮೊಬೈಲ್ ಕಿತ್ತು ತಾಳಗಳನ್ನು ಕೊಟ್ಟು ಜೀವನದಲ್ಲಿ ಸಂಸ್ಕಾರ, ಆಚಾರ, ವಿಚಾರ, ಧರ್ಮ, ಭಜನೆ, ಹಿರಿಯರಿಗೆ ಕೈಮುಗಿದು ನಮಸ್ಕರಿಸುವ ಆಚಾರಗಳು ನಮ್ಮಲ್ಲಿ ವೃದ್ಧಿಯಾಗಬೇಕು. ಆಗಲೇ ಮಕ್ಕಳಲ್ಲಿ ಆವರಿಸಿರುವ ಮೊಬೈಲ್ ನಂತಹ ರಕ್ತ ಬೀಜಾಸುರನ ಸಂಹಾರವಾಗಿ ಮಕ್ಕಳ ಮನಸ್ಸಿನ ತುಂಬಾ ಒಳ್ಳೆಯ ಸುವಿಚಾರಗಳ ಸುಂದರ ನಂದನವನ ಸೃಷ್ಟಿಯಾಗುತ್ತದೆ. ಇಂತಹ ಸುಂದರ ಸಂಸ್ಕೃತಿಯ ಸಂಸ್ಕಾರವುಳ್ಳ ನಮ್ಮ ಭಾರತ ಮಾತೆಗೆ ವಂದಿಸುತ್ತಾ ನಮ್ಮಲ್ಲಿರುವ ಮುದ್ದು ಕಂದಮ್ಮಗಳಿಗೆ ಆಚಾರ, ಸಂಸ್ಕಾರವನ್ನು ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಪ್ರಯತ್ನಿಸೋಣ.

ಯಶುಭ ರೈ
ಎವಿಜಿ ಆಂಗ್ಲ ಮಾಧ್ಯಮ
ಶಾಲೆ, ಬನ್ನೂರು,
ಪುತ್ತೂರು, ದ.ಕ


Share with

Leave a Reply

Your email address will not be published. Required fields are marked *